ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು ಹೋಗಿ ED ಅಧಿಕಾರಿಗಳೇ ಲಾಕ್ ಆಗಿದ್ದಾರೆ. ಸಿಎಂ ಹೆಸರು ಹೇಳುವಂತೆ ನಿಗಮದ ಹಿಂದಿನ ಎಂಡಿ ಕಲ್ಲೇಶಪ್ಪ ಅವರಿಗೆ ED ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಇದೀಗ ಸಚಿವ ಮಹದೇವಪ್ಪ ಅವರು ಟ್ವೀಟ್-X ನಲ್ಲಿ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಟ್ವೀಟ್ನಲ್ಲಿ ಹೇಳಿದ್ದೇನು? – ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೈನ್ ಅವರನ್ನು ರಾಜಕೀಯ ದ್ವೇಷದ ಕಾರಣಕ್ಕೆ ಬಂಧಿಸಿದ ಹಾಗೆ ಸಿದ್ದರಾಮಯ್ಯ ಅವರನ್ನೂ ಸಹ ಬಂಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ತನ್ನ ಇ.ಡಿ ಸಂಸ್ಥೆಯನ್ನು ಬಳಸಿಕೊಳ್ಳುವಂತಹ ಅಸಂವಿಧಾನಿಕ ಕೆಲಸವನ್ನು ಮಾಡುತ್ತಿದೆ. ಕರ್ನಾಟಕದಲ್ಲಿ ಪ್ರಣಾಳಿಕೆಗಳನ್ನು ನೀಡಿ, ಅದಕ್ಕೆ ತಕ್ಕದಾಗಿ ನುಡಿದಂತೆ ನಡೆಯುವ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.
ವೈಯಕ್ತಿಕ ಹಿತಾಸಕ್ತಿಗಳೇ ವಿಜೃಂಭಿಸುತ್ತಾ, ಸರ್ಕಾರ ಎಂದರೆ ಯಾರೋ ಕೆಲವರಿಗೆ ಇರುವ ಅನುಕೂಲದ ವ್ಯವಸ್ಥೆ ಎಂಬಂತಾಗಿರುವ ಕಾಲದಲ್ಲಿ ಸರ್ಕಾರ ಎಂದರೆ ಜನರಿಗಾಗಿ ಇರುವ ವ್ಯವಸ್ಥೆ ಎಂದು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ED ಮೂಲಕ ಸಂಚು ಮಾಡುತ್ತಿರುವ ಕೇಂದ್ರ ಸರ್ಕಾರದ್ದು ಹೇಡಿಗಳ ನಡೆ. ಇಂತಹ ಕುತಂತ್ರಗಳಿಂದ ಕೇಂದ್ರ ಸರ್ಕಾರವು ರಾಜ್ಯ ಜನರ ವಿರೋಧ ಎದುರಿಸುತ್ತದೆಯೇ ವಿನಃ, ಅದರಿಂದ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ.
ಅಷ್ಟಕ್ಕೂ ದೊಡ್ಡ ಜನಬೆಂಬಲದ ಸಹಕಾರದಿಂದ ಮುಖ್ಯಮಂತ್ರಿಯಾಗಿ ಜನಪರವಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅಂತಹ ಜನಪ್ರಿಯ ಮುಖ್ಯಮಂತ್ರಿಯನ್ನು ED ದುರ್ಬಳಕೆ ಸಂಚಿನಿಂದ ಬಂಧಿಸುವ ಹುನ್ನಾರವನ್ನು ಸಹಿಸಲಾದೀತೇ?
ಜನವಿರೋಧಿಗಳಾದ ಈ ಭ್ರಷ್ಟ ಬಿಜೆಪಿಯವರಿಗೇ ಇಷ್ಟೊಂದು ಧೈರ್ಯ, ಭಂಡತನ ಇರಬೇಕಾದರೆ, ಜನಪರವಾಗಿ ಚಿಂತಿಸಿ ಅವರ ಬದುಕಿಗೆ ನೇರವಾಗಿ ಸಹಾಯ ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿರುವ ನಮಗೆ ಇನ್ನೆಷ್ಟು ಧೈರ್ಯ ವಿಶ್ವಾಸ ಇರಬೇಡ, ಅಲ್ಲವೇ? ಎಂದು ಸಚಿವ ಮಹದೇವಪ್ಪ ಅವರು ತಮ್ಮ ಟ್ವೀಟ್-X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ಹಗರಣ ಕೇಸ್ನಲ್ಲಿ ಜೈಲು ಪಾಲಾದ ನಾಗೇಂದ್ರಗೆ ರಾತ್ರಿಯಿಡೀ ಟೆನ್ಷನ್..!