ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ತೆರೆಕಂಡು ನೂರು ದಿನಗಳಾಗಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿರುವುದೇ ವಿರಳವಾಗಿರುವ ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ನೂರುದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಸಂತಸದ ವಿಚಾರ.
ತ್ರಿಶೂಲ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿರುವ ಈ ಸಿನಿಮಾ ಕರ್ನಾಟಕದ ನಾಲ್ಕು ಕಡೆ ಈ ಚಿತ್ರ ನೂರು ದಿನಗಳ ಪ್ರದರ್ಶನ ಕಂಡಿದ್ದು, ಈಗಲೂ ಪ್ರದರ್ಶನವಾಗುತ್ತಿದೆ. ಚಿತ್ರವನ್ನು ಯಶಸ್ವಿ ಮಾಡಿದ ಕನ್ನಡ ಕಲಾಭಿಮಾನಿಗಳಿಗೆ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಾಯಕ ಗಣೇಶ್ ಧನ್ಯವಾದ ತಿಳಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದ ಹಾಡಗಳಂತೂ ಬಹಳ ಜನಪ್ರಿಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಟ್ರೆಂಡಿಂಗ್ನಲ್ಲಿದೆ.
ಆಗಸ್ಟ್ 15ರಂದು ತೆರೆಗೆ ಬಂದಿದ್ದ ಕೃಷ್ಣಂ ಪ್ರಣಯ ಸಖಿ ಸಿನಿಮಾ, ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಫ್ಯಾಮಿಲಿ ಆಡಿಯೆನ್ಸ್ ಮನಗೆದ್ದು, ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಮೋಡಿ ಮಾಡಿತ್ತು.
ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ. ವೆಂಕಟ್ ರಾಮ್ ಪ್ರಸಾದ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿಜ್ ಈಶ್ವರ್ ಸಂಭಾಷಣೆ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಶಶಿಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಶ್ರುತಿ ಸೇರಿ ದೊಡ್ಡ ತಾರಾಗಣವಿದೆ.
ಇದನ್ನೂ ಓದಿ : ಬಡವರ ಅನ್ನ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಅವರ ಶಾಪ ತಟ್ಟಲಿದೆ – ವಿಪಕ್ಷ ನಾಯಕ ಆರ್.ಅಶೋಕ್..!