ಬೆಳಗಾವಿ : ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಐತಿಹಾಸಿಕ ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರು ವರ್ಷಗಳು ತುಂಬಿದೆ. ಹೀಗಾಗಿ ನಾಳೆಯಿಂದ ಕುಂದಾನಗರಿಯಲ್ಲಿ 2 ದಿನಗಳ ಕಾಲ ರಾಜ್ಯ ಕಾಂಗ್ರೆಸ್ ಸರ್ಕಾರ ವಿಜೃಂಭಣೆಯಿಂದ ‘ಮಹಾಧಿವೇಶ’ನ ಶತಮಾನೋತ್ಸವ ಆಚರಣಗೆ ಸಜ್ಜಾಗಿದೆ.
ಗುರುವಾರ ಮತ್ತು ಶುಕ್ರವಾರ ಎರಡು ದಿನ ನಡೆಯುವ ಅದ್ಧೂರಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ಕಾಂಗ್ರೆಸ್ ನಾಯಕರ ದಂಡೇ ಕುಂದಾನಗರಿಯಲ್ಲಿ ಬೀಡು ಬಿಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಂಬಿ ಪಾಟೀಲ್ ಸೇರಿ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ನಾಳೆ ಕುಂದಾ ನಗರಿಯಲ್ಲಿ ಕಾಂಗ್ರೆಸ್ ಕಹಳೆ ಮೊಳಗಲಿದ್ದು, ಬೆಳಗಾವಿ ಪೂರ್ತಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗಾವಿ ನಗರ ಸಂಪೂರ್ಣ ಕಾಂಗ್ರೆಸ್ ಮಯವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕರ ಕಟೌಟ್, ಬ್ಯಾನರ್, ಬಂಟಿಂಗ್ ಭರಾಟೆ ಜೋರಾಗಿದೆ.
ಕಾಂಗ್ರೆಸ್ ಅಧಿವೇಶನದಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ? ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, 140 ಸಂಸದರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ. ಪ್ರಮುಖ ನಾಯಕರಿಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಸಂಜೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ನ ಮುಂದಿನ ವರ್ಷದ ನೀಲಿನಕ್ಷೆ ಅನಾವರಣವಾಗಲಿದೆ. ಆರ್ಥಿಕ ಅಸಮಾನತೆ, ಪ್ರಜಾಪ್ರಭುತ್ವದ ಸವೆತ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ ಸೇರಿ ಹಲವು ವಿಚಾರಗಳ ಮಂಥನ ನಡೆಯಲಿದೆ. ಖರ್ಗೆ ಅವರೇ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಗುರುವಾರ ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಿದ್ದಾರೆ. ಫೋಟೋ ಸೆಷನ್ ಕೂಡ ನಡೆಯಲಿದೆ.
ಇನ್ನು ಡಿ.27ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಹಲವು ಕಮಿಟಿಗಳನ್ನು ಮಾಡಲಾಗಿದೆ. ಊಟ, ವಸತಿ ಸೇರಿ ಒಂದೊಂದು ಕಮಿಟಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ.
ಇದನ್ನೂ ಓದಿ : ಹಣ ವಸೂಲಿ, ಬೆದರಿಕೆ ಪ್ರಕರಣ – ಶಾಸಕ ಮುನಿರತ್ನ ವಿರುದ್ಧ ಪ್ರಾಸಿಕ್ಯೂಷನ್ಗೆ SIT ತಂಡ ಮನವಿ..!