Download Our App

Follow us

Home » ರಾಜಕೀಯ » ಬಿಜೆಪಿಯಿಂದ ಕಣಕ್ಕಿಳಿದಿರುವ ಸೆಲೆಬ್ರಿಟಿಗಳು ಯಾರು ಗೊತ್ತಾ?

ಬಿಜೆಪಿಯಿಂದ ಕಣಕ್ಕಿಳಿದಿರುವ ಸೆಲೆಬ್ರಿಟಿಗಳು ಯಾರು ಗೊತ್ತಾ?

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಮೋದಿ ಮತ್ತೆ ಪ್ರಧಾನಿಯಾಗಬೇಕು ಅನ್ನೋ ಒಂದೇ ಗುರಿ ಇಟ್ಟುಕೊಂಡು ಬಿಜೆಪಿ ಲೋಕಸಭೆ ಚುನಾವಣೆಯನ್ನ ಎದುರಿಸುತ್ತಿದೆ. ಇದಕ್ಕಾಗಿ ಹಲವು ತಂತ್ರಗಳನ್ನ ಹೆಣೆದಿದ್ದು, ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿದೆ. ಹಲವು ಸೆಲೆಬ್ರಿಟಿಗಳನ್ನ ಕಣಕ್ಕಿಳಿಸೋ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದೆ. ಆ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತಾ?

ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ, ಎಚ್ಚರದಿಂದ ಇದ್ದಾಗ, ನಿದ್ರೆಯಲ್ಲಿ ಕನಸು ಕಾಣುತ್ತಿರುವಾಗ, ಯಾವಾಗಲೂ ಮೋದಿ ಜಪ ಮಾಡೋ ಹಂತಕ್ಕೆ ತಲುಪಿ ಬಿಟ್ಟಿದ್ದಾರೆ. ಅದರಲ್ಲೂ ಮೂರನೇ ಬಾರಿಗೆ ಮೋದಿ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚನೆ ಮಾಡಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಕುದುರೆ ಅನ್ನೋರಿಗೆ ಮಾತ್ರ ಟಿಕೆಟ್ ನೀಡ್ತಿದ್ದಾರೆ. ಇದುವರೆಗೆ ಬಿಡುಗಡೆಯಾಗಿರೋ 5 ಪಟ್ಟಿಯಲ್ಲಿ 9 ಜನ ಸೆಲೆಬ್ರಿಟಿಗಳಿಗೆ ಟಿಕೆಟ್ ಘೋಷಣೆಯಾಗಿದೆ. ಗೆಲುವಿನ ಮಾನದಂಡವನ್ನ ಮಾತ್ರ ಇಟ್ಟುಕೊಂಡು ಇವರಿಗೆ ಟಿಕೆಟ್ ನೀಡಲಾಗಿದೆ.


ಹಿಂದಿನಿಂದಲೂ ಬಿಜೆಪಿ ಹಲವು ಸೆಲೆಬ್ರಿಟಿಗಳಿಗೆ ಟಿಕೆಟ್ ಕೊಡುತ್ತಲೇ ಬಂದಿದೆ. ಹಲವು ಖ್ಯಾತನಾಮರನ್ನ ಕಣಕ್ಕಿಳಿಸುವ ಮೂಲಕ ಮತದಾರರ ಮನ ಗೆಲ್ಲಲು ಯತ್ನಿಸಿದೆ. ಇದಕ್ಕೆ ಹೊಸ ಸೇರ್ಪಡೆ ಬಾಲಿವುಡ್ ಬ್ಯೂಟಿ ಕಂಗನಾ ರಾಣಾವತ್​. ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಕಂಗನಾ ರಾಣಾವತ್ ಸುದ್ದಿಯಾಗ್ತಲೇ ಇರುತ್ತಾರೆ. ಬೇಕೋ ಬೇಡವೋ ಕಾಂಟ್ರವರ್ಸಿಗಳಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಾರೆ. ಕೆಲವೊಮ್ಮೆ ಹಿಂದುತ್ವದ ಪರ ನೀಡಿರೋ ಅವರ ಹೇಳಿಕೆಗಳು ಹಲವಾರು ಜನ ಫ್ಯಾನ್ ಆಗೋ ಹಾಗೆ ಮಾಡಿದೆ. ಜೊತೆಗೆ ಅವರನ್ನ ಅಷ್ಟೇ ಮಂದಿ ವಿರೋಧಿಸುವ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ತಮ್ಮದೇ ಆದ ಬ್ರ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ.

ಕಂಗನಾ ರಾಣಾವತ್​ ಮೂಲತಃ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರು. ಕಂಗನಾ ರಾಣಾವತ್​ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿದ್ದರೂ ಸದಾ ತಮ್ಮ ಊರಿನ ಜೊತೆ ನಂಟು ಉಳಿಸಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಇದ್ದಾಗ ಮಾತ್ರ ಕಂಗನಾ ಮುಂಬೈಗೆ ತೆರಳುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ತಮ್ಮ ಊರಿನಲ್ಲಿ ಉಳಿದುಕೊಳ್ಳುತ್ತಾರೆ. ಬಹಳ ಹಿಂದಿನಿಂದಲೂ ಕಂಗನಾ ರಾಣಾವತ್​ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿಗಳು ಓಡಾಡಿದ್ದವು. ಅದರಲ್ಲೂ ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ ಫಸ್ಟ್ ಲಿಸ್ಟ್ ಘೋಷಣೆಗೆ ಮುನ್ನ ಕಂಗನಾ ಬಿಜೆಪಿ ಅಭ್ಯರ್ಥಿಯಾಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಈ ಸುದ್ದಿಗಳನ್ನ ಕಂಗನಾ ರಾಣಾವತ್​ ನಿರಾಕರಿಸಿರಲಿಲ್ಲ.

ಮಾರ್ಚ್ ಮೊದಲ ವಾರದಲ್ಲಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಿತ್ತು. ಮೊದಲ ಲಿಸ್ಟ್​ನಲ್ಲಿಯೇ ಕಂಗನಾ ರಾಣಾವತ್ ಹೆಸರು ಇರಲಿದೆ ಅಂತಾ ಊಹಿಸಲಾಗಿತ್ತು. ಆದರೆ, ಪಟ್ಟಿ ಹೊರ ಬಂದ ಬಳಿಕ ಕಂಗನಾ ಹೆಸರು ಇರಲಿಲ್ಲ. ಇದಾದ ಬಳಿಕ ಕಂಗನಾ ರಾಣಾವತ್ ಪಾಲಿಟಿಕ್ಸ್ ಎಂಟ್ರಿ ಕುರಿತ ಸುದ್ದಿಗಳು ತಣ್ಣಗಾಗಿದ್ದವು. ಇದಾದ ಬಳಿಕ ಕಂಗನಾ ಹೆಸರು ಹೆಚ್ಚಾಗಿ ಕೇಳಿ ಬರುತ್ತಿರಲಿಲ್ಲ. ಆದರೆ, ಭಾನುವಾರ ಬಿಜೆಪಿ 5ನೇ ಪಟ್ಟಿ ಬಿಡುಗಡೆಯಾಗಿ ಕಂಗನಾ ಹೆಸರು ಕಾಣಿಸುತ್ತಿದ್ದಂತೆ ಮತ್ತೆ ಬಾಲಿವುಡ್ ಬ್ಯೂಟಿ ದೊಡ್ಡ ಸದ್ದು ಮಾಡ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಅವರ ತಂದೆ ಜೈ ರಾಮ್ ಠಾಕೂರ್ ಭದ್ರಕೋಟೆಯಾಗಿರೋ ಮಂಡಿಯಿಂದ ಕಂಗನಾ ಕಣಕ್ಕಿಳಿಯುತ್ತಿರೋದ್ರಿಂದ ಅವರ ಗೆಲುವು ಪಕ್ಕಾ ಅಂತಲೇ ಹಲವರು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್​ ಮಂಡಿಯಲ್ಲಿ ಅಭ್ಯರ್ಥಿಗಳ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಕಂಗನಾ ರಾಣಾವತ್ ಗೆಲುವು ಬಹುತೇಕ ಖಚಿತವಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಮೋದಿ ಸುನಾಮಿ ಎದ್ದಿತ್ತು. 2019ರಲ್ಲೂ ಇದು ಪುನರಾವರ್ತನೆಯಾಗಿತ್ತು. ಈ ಎರಡು ಬಾರಿ ಹೇಮಾ ಮಾಲಿನಿ ಕೃಷ್ಣ ಜನ್ಮಸ್ಥಾನ ಮಥುರಾದಿಂದ ಕಣಕ್ಕಿಳಿದಿದ್ದರು. 2014ರಲ್ಲಿ ರಾಷ್ಟ್ರೀಯ ಲೋಕ ದಳದ ಜಯಂತ್ ಚೌಧರಿ ವಿರುದ್ಧ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲೋ ಮೂಲಕ ಲೋಕಸಭೆ ಪ್ರವೇಶ ಮಾಡಿದ್ದರು. 2019ರಲ್ಲಿ ಮಥುರಾದಿಂದ ಎರಡನೇ ಬಾರಿ ಗೆದ್ದಿದ್ದರು. ಹೇಮಾ ಮಾಲಿನಿಗೆ ಈಗ 75 ವರ್ಷ. ಬಿಜೆಪಿಯಲ್ಲಿ 75 ವರ್ಷ ತುಂಬಿದವರಿಗೆ ಯಾವುದೇ ಸ್ಥಾನಮಾನ ಸಿಗಲ್ಲ. ಆದರೆ, ಹೇಮಾ ಮಾಲಿನಿ ವಿಚಾರದಲ್ಲಿ ಬಿಜೆಪಿ ತಾನೇ ರೂಪಿಸಿದ್ದ ನಿಯಮವನ್ನ ಮುರಿದಿದೆ.


ಮಥುರಾದಲ್ಲಿ ಹೇಮಾ ಮಾಲಿನಿ ಸಕ್ರಿಯರಾಗಿದ್ದಾರೆ. ಜನರ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಬಿಜೆಪಿ ನಡೆಸಿದ್ದ ಆಂತರಿಕ ಸರ್ವೆಗಳು ಕೂಡ ಹೇಮಾ ಮಾಲಿನಿ ಪರ ಇದ್ದವು. ಇದೇ ಕಾರಣಕ್ಕೆ ಹೇಮಾ ಮಾಲಿನಿಗೆ ಬಿಜೆಪಿ ಟಿಕೆಟ್ ನೀಡಿದೆ. ಸದ್ಯ 75ನೇ ವರ್ಷಕ್ಕೆ ಕಾಲಿಟ್ಟಿರೋ ಹೇಮಾ ಮಾಲಿನಿ ಜನಪ್ರಿಯತೆ ಒಂಚೂರು ಕುಗ್ಗಲಿಲ್ಲ. ಮೂಲತಃ ತಮಿಳುನಾಡಿನವರಾದರೂ ಹೇಮಾ ಮಾಲಿನಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದಾರೆ. ಹಿಂದಿಯನ್ನೂ ಅದ್ಭುತವಾಗಿ ಮಾತನಾಡುತ್ತಾರೆ. ಜೊತೆಗೆ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿದ್ದು, ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸುತ್ತಾರಾ ಅನ್ನೋದಕ್ಕೆ ಫಲಿತಾಂಶ ಉತ್ತರ ನೀಡಲಿದೆ.

ಗೋರಖ್​ಪುರ ಹೆಸರು ಕೇಳಿದರೆ ಥಟ್ ಅಂತಾ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೆನಪಾಗುತ್ತಾರೆ. ಯೋಗಿ ಆದಿತ್ಯನಾಥ್ ಅವರ ಗುರುಗಳಾದ ಯೋಗಿ ಅವೇದ್ಯನಾಥ್ ಕಾಲದಿಂದಲೂ ಗೋರಖ್​ಪುರ ಬಿಜೆಪಿ ಭದ್ರಕೋಟೆಯಾಗಿದೆ. 1989ರಲ್ಲಿ ಯೋಗಿ ಅವೇದ್ಯನಾಥ್ ಹಿಂದೂ ಮಹಾಸಭಾದಿಂದ ಸ್ಪರ್ಧಿಸಿ ಗೆದ್ದಿದ್ದರು. 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಇದಾದ ಬಳಿಕ ಇಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಸೋಲು ಕಂಡಿದೆ. ಇಂತಾ ಕ್ಷೇತ್ರದಿಂದ ಖ್ಯಾತ ಭೋಜ್​ಪುರಿ ನಟ ರವಿ ಕಿಷನ್​ಗೆ ಬಿಜೆಪಿ ಟಿಕೆಟ್ ನೀಡಿದೆ. ರವಿ ಕಿಷನ್ ಕೇವಲ ಭೋಜ್​ಪುರಿ ನಟ ಮಾತ್ರವೇ ಅಲ್ಲ, ಹಿಂದಿ, ತೆಲುಗು ಸೇರಿ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಮೊದಲ ಬಾರಿಗೆ ಗೋರಖ್​ಪುರದಿಂದ ಸ್ಪರ್ಧಿಸಿ ಗೆದ್ದಿದ್ರು. ಸಿನಿಮಾ ರಂಗದಲ್ಲಿ ಸಕ್ರಿಯರಾಗಿರೋ ಜೊತೆಗೆ ಕ್ಷೇತ್ರದ ಜೊತೆಗೂ ನಿಕಟ ಸಂಬಂಧ ಹೊಂದಿದ್ದಾರೆ. ಜೊತೆಗೆ ಯೋಗಿ ಭದ್ರಕೋಟೆಯಿಂದ ಕಣಕ್ಕಿಳಿಯುತ್ತಿರೋದರಿಂದ ಸುಲಭವಾಗಿ ಗೆದ್ದು ಬೀಗುತ್ತಾರಾ ಅನ್ನೋದು ಫಲಿತಾಂಶದ ದಿನ ಗೊತ್ತಾಗಲಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು, ಗೆದ್ದು ಹ್ಯಾಟ್ರಿಕ್ ಬಾರಿಸಬೇಕು ಅನ್ನೋ ಒಂದೇ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಕೇವಲ ಸಿನಿಮಾ ನಟರಿಗೆ ಮಾತ್ರ ಬಿಜೆಪಿ ಟಿಕೆಟ್ ಸಿಕ್ಕಿಲ್ಲ, ಕ್ರೀಡಾಪಟು ಒಬ್ಬರಿಗೂ ಬಿಜೆಪಿ ಅವಕಾಶ ನೀಡಿದೆ. ಈ ಮೂಲಕ ಎಲ್ಲ ವರ್ಗದವರ ವಿಶ್ವಾಸ ಗಳಿಸಲು ಮುಂದಾಗಿದೆ.

ಖ್ಯಾತ ಭೋಜ್​ಪುರಿ ನಟ ರವಿ ಕಿಷನ್ ರೀತಿಯೇ ಉತ್ತರ ಪ್ರದೇಶದ ಮತ್ತೊಂದು ಪ್ರಮುಖ ಕ್ಷೇತ್ರ ಅಜಂಗಢದಲ್ಲಿ ಮತ್ತೊಮ್ಮ ಭೋಜ್​ಪುರಿ ನಟ ದಿನೇಶ್ ಲಾಲ್ ಯಾದವ್ ಅಲಿಯಾಸ್ ನಿರಾಹುವ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. 2019ರಲ್ಲೂ ದಿನೇಶ್ ಲಾಲ್ ಯಾದವ್ ಕಣಕ್ಕಿಳಿದಿದ್ದರು. ಇಡೀ ದೇಶದಲ್ಲಿ ಮೋದಿ ಸುನಾಮಿ ಸೃಷ್ಟಿಯಾಗಿದ್ದರೂ ದಿನೇಶ್ ಯಾದವ್ ಸೋಲು ಕಂಡಿದ್ದರು. ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅಜಂಗಢದಿಂದ ಕಣಕ್ಕಿಳಿದಿದ್ದ ಕಾರಣಕ್ಕೆ ದಿನೇಶ್ ಲಾಲ್ ಯಾದವ್ ಸೋತು ಹೋಗಿದ್ದರು. ಆದರೆ, 2022ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ದಿನೇಶ್ ಲಾಲ್ ಯಾದವ್ ಗೆದ್ದಿದ್ದರು. ಈಗ ಮತ್ತೊಮ್ಮೆ ಅವರಿಗೆ ಟಿಕೆಟ್ ನೀಡಲಾಗಿದೆ.

ಅಜಂಗಢ ಸಮಾಜವಾದಿ ಪಕ್ಷದ ಭದ್ರಕೋಟೆ ಅಂತಲೇ ಗುರುತಿಸಿಕೊಂಡಿದೆ. ಇಂತಾ ಅಜಂಗಢದಲ್ಲಿ ಯಾದವ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತೆ. ಜೊತೆಗೆ ಅಷ್ಟೇ ಪ್ರಮಾಣದ ಮುಸ್ಲಿಂ ಮತದಾರರು ಇದ್ದಾರೆ. 2022ರಲ್ಲಿ ಅಜಂಗಢದಲ್ಲಿ ಬಿಎಸ್​ಪಿ ಅಭ್ಯರ್ಥಿ ಶಾ ಆಲಂ ಅಲಿಯಾಸ್ ಗುಡ್ಡು ಜಮಾಲಿ ಸ್ಪರ್ಧೆ ಮಾಡಿದ್ದರಿಂದಲೇ ದಿನೇಶ್ ಲಾಲ್ ಯಾದವ್ ಗೆದ್ದಿದ್ದರು. ಇಲ್ಲಿ ಸಮಾಜವಾದಿ ಪಕ್ಷದ ಎಂವೈ ಫಾರ್ಮುಲಾ ಅಂದ್ರೆ ಮುಸ್ಲಿಂ-ಯಾದವ್ ಮತಬ್ಯಾಂಕ್ ತಂತ್ರಗಾರಿಕೆ ಪಕ್ಕಾ ವರ್ಕೌಟ್ ಆಗಲಿದೆ. ಆದ್ರೆ, ಬಿಎಸ್​ಪಿ ಇಲ್ಲಿ ಮತ್ತೆ ಗುಡ್ಡು ಜಮಾಲಿಯನ್ನ ಕಣಕ್ಕಿಳಿಸಿದ್ದರೆ ದಿನೇಶ್ ಲಾಲ್ ಯಾದವ್ ಗೆಲುವು ಕಾಣುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಬ್ಬ ಭೋಜ್​ಪುರಿ ನಟ ಮನೋಜ್ ತಿವಾರಿ ಈಶಾನ್ಯ ದೆಹಲಿಯಿಂದ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. 2014, 2019ರಲ್ಲಿ ಗೆದ್ದಿರೋ ಮನೋಜ್ ತಿವಾರಿ ಹ್ಯಾಟ್ರಿಕ್ ಬಾರಿಸೋ ಕನಸು ಕಾಣುತ್ತಿದ್ದಾರೆ. ದೆಹಲಿಯ ಮತದಾರರು ಸಹ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ವಿಭಿನ್ನ ರೀತಿಯಾಗಿ ಮತ ಚಲಾಯಿಸ್ತಿದ್ದಾರೆ ಅನ್ನೋದು ಇಡೀ ಜಗತ್ತಿಗೇ ಗೊತ್ತು. ವಿಧಾನಸಭೆಯಲ್ಲಿ ಆಮ್ ಆದ್ಮಿ ಅಪ್ಪಿಕೊಳ್ಳೋ ದೆಹಲಿ ಜನ, ಲೋಕ ಕದನದಲ್ಲಿ ಬಿಜೆಪಿ ಕೈ ಹಿಡೀತಿದ್ದಾರೆ. ಈ ಬಾರಿ ಇದರಲ್ಲಿ ಸ್ವಲ್ಪ ಬದಲಾವಣೆ ಆಗೋ ಸಮಯ ಬಂದಿದೆ. ಹೀಗಾಗಿ ಮನೋಜ್ ತಿವಾರಿ ಹ್ಯಾಟ್ರಿಕ್ ಬಾರಿಸ್ತಾರಾ ಇಲ್ವಾ ಅನ್ನೋದು ಫಲಿತಾಂಶ ಬಂದ ಬಳಿಕವಷ್ಟೇ ಗೊತ್ತಾಗಲಿದೆ.


ಪಶ್ಚಿಮ ಬಂಗಾಳದ ಹೂಗ್ಲಿಯಿಂದ ಬಂಗಾಳಿ ನಟಿ, ನೃತ್ಯಗಾರ್ತಿ ಲಾಕೆಟ್ ಚಟರ್ಜಿಯನ್ನ ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ಕಳೆದ ಬಾರಿ ಹೂಗ್ಲಿಯಿಂದ ಸ್ಪರ್ಧಿಸಿ ಗೆದ್ದಿದ್ದ ಲಾಕೆಟ್ ಚಟರ್ಜಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬೆಂಕಿಯುಂಡೆಗಳನ್ನ ಉಗುಳುತ್ತಾರೆ. ಇಂತಾ ಲಾಕೆಟ್ ಚಟರ್ಜಿಯನ್ನ ಸೋಲಿಸಲೇಬೇಕು ಅಂತಾ ಮಮತಾ ದೀದಿ ಹಠಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಲಾಕೆಟ್ ಚಟರ್ಜಿ ವಿರುದ್ಧ ಬಂಗಾಳಿ ನಟಿ ರಚನಾ ಬ್ಯಾನರ್ಜಿಯನ್ನ ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ಹೂಗ್ಲಿ ಚುನಾವಣಾ ಕಣ ರಂಗೇರಿದೆ.

ಹಲವಾರು ದಶಕಗಳಿಂದಲೂ ಕೇರಳದಲ್ಲಿ ಖಾತೆ ತೆರೆಯಲು ಬಿಜೆಪಿ ಹೆಣಗಾಡುತ್ತಿದೆ. ಆರ್​ಎಸ್​ಎಸ್​ ಕಾರ್ಯಕರ್ತರ ಪಡೆಯನ್ನ ಹೊಂದಿದ್ದರೂ ಕೇರಳದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ತಿಣುಕಾಡುತ್ತಿದೆ. ಇಂತಾ ಕೇರಳದ ತ್ರಿಶೂರಿನಲ್ಲಿ ಮಲಯಾಳಂ ನಟ ಸುರೇಶ್ ಗೋಪಿಗೆ ಬಿಜೆಪಿ ಟಿಕೆಟ್ ನೀಡಿದೆ. ಸುರೇಶ್ ಗೋಪಿ ಪರ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ಮಾಡಿದ್ದಾರೆ. ಬಿಜೆಪಿಗೆ ಸೈದ್ಧಾಂತಿಕವಾಗಿ ಪ್ರಮುಖವಾಗಿರೋ ಕೇರಳದಲ್ಲಿ ಈ ಬಾರಿ ನಟ ಸುರೇಶ್ ಗೋಪಿ ಮೂಲಕ ಬಿಜೆಪಿ ಅಕೌಂಟ್ ಓಪನ್ ಮಾಡುತ್ತಾ ಅನ್ನೋ ಕುತೂಹಲ ಈಗ ಉಳಿದುಕೊಂಡಿದೆ.

ರಾಜಸ್ಥಾನದ ಚುರು ಕ್ಷೇತ್ರದಲ್ಲಿ ಬಿಜೆಪಿ ದಿವ್ಯಾಂಗ ಕ್ರೀಡಾಪಟು ದೇವೇಂದ್ರ ಝಜಾರಿಯಾಗೆ ಟಿಕೆಟ್ ನೀಡಿದೆ. ದೇವೇಂದ್ರ ಝಜಾರಿಯಾ 2004ರ ಅಥೆನ್ಸ್​, 2016ರ ರಿಯೋ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಪಡೆದು ದಾಖಲೆ ಬರೆದಿದ್ದಾರೆ. ಚುರು ಕ್ಷೇತ್ರದಲ್ಲಿ ಹಾಲಿ ಸಂಸದ ರಾಹುಲ್ ಕಾಸ್ವಾನ್ ಬದಲಿಗೆ ದೇವೇಂದ್ರ ಝಜಾರಿಯಾರನ್ನ ಕಣಕ್ಕಿಳಿಸೋ ಮೂಲಕ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಬಿಜೆಪಿ ಟಿಕೆಟ್ ತಪ್ಪಿದ ಕಾರಣಕ್ಕೆ ರಾಹುಲ್ ಕಾಸ್ವಾನ್ ಕಾಂಗ್ರೆಸ್​ನಿಂದ ಟಿಕೆಟ್ ಪಡೆದು ಅವರ ಎದುರಾಳಿಯಾಗಿದ್ದಾರೆ.

ಇದುವರೆಗೆ ನೋಡಿದ ಸೆಲೆಬ್ರಿಟಿಗಳದ್ದೇ ಒಂದು ತೂಕವಾದರೆ, ಸ್ಮೃತಿ ಇರಾನಿಯವರದ್ದೇ ಮತ್ತೊಂದು ತೂಕ. ಅಮೇಥಿ ಅನ್ನೋ ನೆಹರು-ಗಾಂಧಿ ಕುಟುಂಬದ ಭದ್ರಕೋಟೆಯನ್ನ ಪುಡಿಗಟ್ಟಿದ ಕೀರ್ತಿ ಸ್ಮೃತಿ ಇರಾನಿಗೆ ಸಲ್ಲುತ್ತೆ. ಕೇವಲ ಭದ್ರಕೋಟೆ ಮಾತ್ರವೇ ಅಲ್ಲ, 2019ರಲ್ಲಿ ಆಗಿನ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯನ್ನೇ ಅವರದ್ದೇ ಕೋಟೆಯಲ್ಲಿ ಸೋಲಿಸಿದ ಹಿರಿಮೆ ಸ್ಮೃತಿ ಇರಾನಿಗೆ ಸಲ್ಲುತ್ತದೆ. 2014ರಲ್ಲಿಯೂ ಸ್ಮೃತಿ ಇರಾನಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಆದರೆ, 2014ರಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿ ಸೋಲು ಕಂಡಿದ್ದರು. 2014ರಲ್ಲಿ ಮೊದಲ ಬಾರಿಗೆ ಸ್ಮೃತಿ ಇರಾನಿ ಅಮೇಥಿಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದಾದ ಬಳಿಕ ಸ್ಮೃತಿ ಇರಾನಿ ಅಮೇಥಿಯಿಂದ ದೂರ ಉಳಿಯಲಿಲ್ಲ. ಬದಲಿಗೆ ಅಮೇಥಿಯ ಜನರ ಜೊತೆಗೆ ತಮ್ಮ ಒಡನಾಟ ಮುಂದುವರಿಸಿದ್ದರು.

2014ರಿಂದಲೂ ಕೆಲಸ ಮಾಡುತ್ತಾ, 2019ರ ಹೊತ್ತಿಗೆ ರಾಹುಲ್ ಗಾಂಧಿಯನ್ನ ಸೋಲಿಸಲು ಭದ್ರ ತಳಪಾಯ ಹಾಕಿದ್ದರು. 2019ರ ವೇಳೆಗೆ ಅಮೇಥಿಯಲ್ಲಿ ತಮ್ಮದೇ ಕಾರ್ಯಕರ್ತರ ಪಡೆ ಕಟ್ಟುವಲ್ಲಿ ಸ್ಮೃತಿ ಯಶಸ್ವಿಯಾಗಿದ್ದರು. 2019ರಲ್ಲಿ ಸೋಲುವ ಭಯದಿಂದ ರಾಹುಲ್ ಗಾಂಧಿ ಅಮೇಥಿ ಜೊತೆಗೆ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋತರೆ, ವಯನಾಡಿನಲ್ಲಿ ಗೆದ್ದು ತೀವ್ರ ಮುಖಭಂಗ ಎದುರಾಗೋದನ್ನ ತಪ್ಪಿಸಿಕೊಂಡಿದ್ದರು. ಈ ಬಾರಿಯೂ ಅಮೇಥಿಯಿಂದ ನೆಹರೂ-ಗಾಂಧಿ ಕುಟುಂಬದ ಕುಡಿಗಳೇ ಸ್ಪರ್ಧೆ ಮಾಡ್ತಾರಾ..? ಅಮೇಥಿಯಲ್ಲಿ ಮತ್ತೊಮ್ಮೆ ಸ್ಮೃತಿ ವರ್ಸಸ್​ ರಾಹುಲ್ ಫೈಟ್ ನಡೆಯುತ್ತಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಸ್ಮೃತಿ ಇರಾನಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಆದರೆ, ಅಮೇಥಿಯಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ಹಿಂದೇಟು ಹಾಕ್ತಿದ್ದಾರೆ ಅಂತಾ ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಅಂದರೆ ತಮ್ಮ ಕುಟುಂಬದ ಭದ್ರಕೋಟೆಯಲ್ಲೇ ಸ್ಪರ್ಧೆಗೆ ರಾಹುಲ್ ಗಾಂಧಿ ಭಯ ಪಡ್ತಿದ್ದಾರೆ ಅಂದ್ರೆ, ಸ್ಮೃತಿ ಇರಾನಿ ವಿರುದ್ಧದ ಸೋಲು ಅವರಿಗೆ ಅದ್ಯಾವ ಪರಿ ಹೊಡೆತ ನೀಡಿದೆ ಅನ್ನೋದಕ್ಕೆ ಉದಾಹರಣೆಯಾಗಿದೆ.

BTV KANNADA DESK

ಇದನ್ನೂ ಓದಿ :ಸ್ಕೂಟರ್ ಚಲಾಯಿಸುತ್ತಲೇ ಮೀಟಿಂಗ್​ಗೆ ಅಟೆಂಡ್ ಆದ ವ್ಯಕ್ತಿ : ವಿಡಿಯೋ ವೈರಲ್..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here