ಬೆಂಗಳೂರು : ಈಗಾಗಲೇ ಮಾಲಿವುಡ್‌ನಲ್ಲಿ ಹೇಮಾ ವರದಿ ಸುನಾಮಿ ಎಬ್ಬಿಸಿದ್ದು, ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್ವುಡ್ಗೂ ಬಂದಪ್ಪಳಿಸುವಂತಿದೆ. ಫಿಲ್ಮ್ ಚೇಂಬರ್‌ನಲ್ಲಿ ಇಂದು ಮೆಗಾ ಮೀಟಿಂಗ್ ನಡೆಯಲಿದ್ದು, ಚಿತ್ರರಂಗದ ಸಮಸ್ಯೆ ವಿಚಾರವಾಗಿ ಫಿಲ್ಮ್ ಚೇಂಬರ್‌ಗೆ ಮಹಿಳಾ ಅಯೋಗದ ಪತ್ರದ ಬೆನ್ನಲ್ಲೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಗೆ ಮುಂದಾಗಿದೆ. ಹಾಗಾಗಿ ಕಲಾವಿದರ ಸಂಘಕ್ಕೆ ಪತ್ರ ಬರೆದು ಇಂದಿನ ಸಭೆ ಬಗ್ಗೆ ಫಿಲ್ಮ್ ಚೇಂಬರ್ ನಟಿಯರಿಗೆ ಮಾಹಿತಿ ನೀಡಿದೆ.
ಈಗಾಗಲೇ ಕೇರಳ ಮಾದರಿ ತನಿಖೆಗೆ ಸಮಿತಿ ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ (FIRE) ಸಂಸ್ಥೆ ಆಗ್ರಹಿಸಿದೆ. ಮಹಿಳಾ ಕಲಾವಿದರು, ನಟಿಯರು, ತಂತ್ರಜ್ಞರು, ನಿರ್ದೇಶಕಿಯರ ಸುರಕ್ಷತೆ ನಿಟ್ಟಿನಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕವಿತಾ ಲಂಕೇಶ್, ರಮ್ಯಾ, ಆಶಿಕಾ ರಂಗನಾಥ್, ಶೃತಿ ಹರಿಹರನ್, ಮಾನ್ವಿತಾ, ಪೂಜಾ ಗಾಂಧಿ, ಸುದೀಪ್, ಚೇತನ್ , ಕಿಶೋರ್, ನಿರ್ದೇಶಕ ಸುನಿ ಸೇರಿದಂತೆ 153 ಜನರ ಸಹಿಯುಳ್ಳ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಚಿತ್ರರಂಗದಲ್ಲಿ ಮಹಿಳೆಯರು ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನಿಯಮಗಳನ್ನು ತರುವಂತೆ ಫೈರ್ ಸಂಸ್ಥೆ ಒತ್ತಾಯಿಸಿದೆ.
ಹಾಗಾಗಿ ಇಂದು ರಾಜ್ಯ ಮಹಿಳಾ ಆಯೋಗ ಕಲಾವಿದೆಯರ ಜೊತೆ ಸಭೆ ನಡೆಸಲಿದ್ದು, ತಮಗಾದ ಅನುಭವಗಳ ಬಗ್ಗೆ ಮಾಹಿತಿ ನೀಡಲು ಆಯೋಗ ಮನವಿ ಮಾಡಲಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದ್ದು, ಯಾವ್ಯಾವ ನಟಿಯರು ಮಹಿಳಾ ಆಯೋಗದ ಸಭೆಗೆ ಬರ್ತಿದ್ದಾರೆ? ಯಾರ ವಿರುದ್ಧ ಏನ್ ಮಾಹಿತಿ ನೀಡ್ತಾರೆ ಸ್ಯಾಂಡಲ್ವುಡ್ ನಟಿಯರು? ಯಾವ ಡೈರೆಕ್ಟರ್, ಯಾವ ಪ್ರೊಡ್ಯೂಸರ್, ಯಾವ ನಟನಿಂದ ಸಮಸ್ಯೆ? ನಟಿಯರು ಕಾಸ್ಟಿಂಗ್ ಕೌಚ್ ಅನುಭವವನ್ನು ಆಯೋಗದ ಮುಂದೆ ಹೇಳ್ತಾರಾ? ಎಂಬೆಲ್ಲ ವಿಚಾರಗಳ ಬಗ್ಗೆ ಸದ್ಯ ಚಿತ್ರರಂಗದಲ್ಲಿ ಚರ್ಚೆಗಳು ನಡೆಯುತ್ತಿದೆ.
ಇದನ್ನೂ ಓದಿ : ಮಾಜಿ ಮಂತ್ರಿ ಮುನಿರತ್ನ ವಿರುದ್ಧ ತಿರುಗಿಬಿದ್ದ ಒಕ್ಕಲಿಗರು – ಕಠಿಣ ಕ್ರಮಕ್ಕೆ ಆಗ್ರಹ..!