ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ನೀಡಿದ್ದ 14 ಸೈಟುಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ನೀಡಿದ್ದರು. ಸಿದ್ದು ನಂತರ ಇದೀಗ ವಿವಾದಕ್ಕೆ ಕಾರಣವಾಗಿದ್ದ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ CA ನಿವೇಶನವನ್ನ KIADBಗೆ ಖರ್ಗೆ ಫ್ಯಾಮಿಲಿ ವಾಪಸ್ ನೀಡಿದೆ.
ಈ ಹಿಂದೆ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿ.ಎ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆದಿತ್ತು. ಸಿ.ಎ ನಿವೇಶನಕ್ಕಾಗಿ ಕೆಐಎಡಿಬಿಗೆ ಒಟ್ಟು 193 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ 43 ಸಂಸ್ಥೆಗಳು ಆಯ್ಕೆಯಾಗಿದ್ದವು. ಆ ಪೈಕಿ ಅಂತಿಮವಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿ.ಎ ನಿವೇಶನ ಹಂಚಿಕೆಯಾಗಿತ್ತು. ಆದರೆ ಹಂಚಿಕೆ ಪ್ರಕ್ರಿಯೆ ಬಗ್ಗೆ ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು.
ಈ ನಡುವೆ, ಟ್ರಸ್ಟ್‌ಗೆ ರಾಜ್ಯ ಸರಕಾರ ನಿಯಮಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ಸಿ.ಎ ನಿವೇಶನ ಮಂಜೂರು ಮಾಡಿದೆ ಎಂದು ಆರೋಪಿಸಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ ಬಗ್ಗೆ ತನಿಖೆಯಾಗಬೇಕು ಎಂದು ಕೋರಿ ರಾಜ್ಯಪಾಲರಿಗೆ ದೂರು ನೀಡಿದ್ದರು.
ದೂರನ್ನು ಪರಿಶೀಲಿಸಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ ನಿಯಮ ಉಲ್ಲಂಘಿಸಿ ಸಿ.ಎ ನಿವೇಶನ ಹಂಚಿಕೆ ಮಾಡಿರುವ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದರು. ಇದಾದ ಬೆನ್ನಲ್ಲೇ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ನೀಡಲಾಗಿದ್ದ ಭೂಮಿಯನ್ನು ಮಲ್ಲಿಕಾರ್ಜುನ ಖರ್ಗೆ ಫ್ಯಾಮಿಲಿ ವಾಪಸ್ ನೀಡಿದೆ.
ಇದನ್ನೂ ಓದಿ : ಸೆಟ್ಟೇರಿತು ‘ಅಭಿಮನ್ಯು s/o ಕಾಶಿನಾಥ್’.. ಕಾಶಿನಾಥ್ ಪುತ್ರನ ಸಿನಿಮಾಗೆ ಕೋಮಲ್ ಸಾಥ್..!