ಬೆಂಗಳೂರು : ಕಾವೇರಿ ನಿವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ನಿನ್ನೆ ಸಭೆ ನಡೆಸಿ, ರಾಜ್ಯ ರಾಜಕಾರಣದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಮುಡಾ ಹಗರಣ, ಉಪ ಚುನಾವಣೆ, ಸಿಎಂ ಬದಲಾವಣೆ ಪುಕಾರು ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆಗಿನ ಕೆ.ಸಿ.ವೇಣುಗೋಪಾಲ್ ಭೇಟಿಯು ಕುತೂಹಲ ಮೂಡಿಸಿತ್ತು. ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಮಾಹಿತಿ ಪಡೆದ ಕೆ.ಸಿ.ವೇಣುಗೋಪಾಲ್, ಚುನಾವಣೆ ಸಿದ್ಧತೆ, ಕಾರ್ಯತಂತ್ರದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಯಾವುದೇ ಕಾರಣಕ್ಕೂ ಉಪಚುನಾವಣೆಯನ್ನ ಹಗುರವಾಗಿ ಪರಿಗಣಿಸಬೇಡಿ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ಗೆಲ್ಲುವುದು ನಮ್ಮ ಗುರಿಯಾಗಿರಲಿ. ಮೂರು ಕ್ಷೇತ್ರಗಳಿಗೂ ಸಚಿವರಿಗೆ ಜವಾಬ್ದಾರಿ ನಿಗದಿ ಮಾಡಿ ಗೆಲ್ಲಿಸುವ ಹೊಣೆ ನೀಡಿ. ಗೆಲ್ಲುವ ಅಭ್ಯರ್ಥಿಗಳನ್ನ ಗುರುತಿಸುವ ಕೆಲಸವಾಗಲಿ. ಯಾವುದೇ ಹಂತದಲ್ಲಿ ನಾವು ಮೈಮರೆಯಬಾರದು, ಆದಷ್ಟು ಬೇಗ ಗೆಲ್ಲುವ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯನ್ನ ಕಳುಹಿಸಿಕೊಡಿ ಎಂದು ಕೆ.ಸಿ.ವೇಣುಗೋಪಾಲ್ ಸಿಎಂ, ಡಿಸಿಎಂಗೆ ಸೂಚಿಸಿದ್ದಾರೆ.
ಸುಮಾರು ಒಂದು ಗಂಟೆ ಕಾಲ ವೇಣುಗೋಪಾಲ್ ಸಿಎಂ, ಡಿಸಿಎಂ ಜೊತೆ ಚರ್ಚೆ ನಡೆಸಿದ್ದು, ಮುಡಾ ಪ್ರಕರಣದ ಸಂಬಂಧ ಆಗುತ್ತಿರುವ ಬೆಳವಣಿಗೆಗಳು, ಸಚಿವರು, ಶಾಸಕರು ಸಿಎಂ ಬದಲಾವಣೆ ಕುರಿತು ನೀಡಿರುವ ಬಹಿರಂಗ ಹೇಳಿಕೆಗಳು, ದಲಿತ ಸಿಎಂ ಹೇಳಿಕೆ, ಸಚಿವರ ರಹಸ್ಯ ಸಭೆ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ.. ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ತಾಯಿ ಕಾವೇರಿ..!