ಬೆಂಗಳೂರು : ಬಹುನಿರೀಕ್ಷಿತ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್‌ನ್ನು ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಇನ್ನು ಈ ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು “ಇದು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿರುವ ಬಜೆಟ್”ಎಂದಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಜೆಟ್ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿರುವ ಬಜೆಟ್ ಎಂದು ವಿ.ಸೋಮಣ್ಣ ಅವರು ಸಮರ್ಥಿಸಿದ್ದು, ಯುವಕರಿಗೆ ಉದ್ಯೋಗವಕಾಶ, ಮಹಿಳೆಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ನೀಡಲಾಗಿದೆ. ದಲಿತ-ಹಿಂದುಳಿದ ವರ್ಗಗಳ ಎಳಿಗೆಗಾಗಿ ಪೂರಕವಾದ ಯೋಜನೆಗಳನ್ನ ಬಜೆಟ್‌ನಲ್ಲಿ ಕಲ್ಪಿಸಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ 2.06 ಲಕ್ಷ ಕೋಟಿ ಅನುದಾನ ಘೋಷಣೆ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸೋಮಣ್ಣ ಹೇಳಿದ್ದಾರೆ.
ರೈತರ ಕ್ಷೇಮಾಭಿವೃದ್ಧಿಗಾಗಿ ಮೋದಿ ಸರ್ಕಾರ 1.52 ಲಕ್ಷ ಕೋಟಿ ಅನುದಾನ ಒದಗಿಸಿದೆ. ವಿದ್ಯುತ್ ಸ್ಥಾವರ ಸೇರಿದಂತೆ ವಿದ್ಯುತ್ ಯೋಜನಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 15 ಕೋಟಿ ವಸತಿಗಳಿಗೆ ಕುಡಿಯುವ ನೀರನ ಸೌಲಭ್ಯ ಪೂರೈಸುವ ಮಾಹಿತಿಯನ್ನ ವಿ.ಸೋಮಣ್ಣ ನೀಡಿದ್ದಾರೆ.
10 ವರ್ಷಗಳಲ್ಲಿ ದೇಶದಾದ್ಯಂತ ರೈಲ್ವೆ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಪ್ರಗತಿಯಾಗಿದೆ. ಪ್ರಸ್ತುತ ಚಾಲನೆಯಲ್ಲಿರುವ ರಾಜ್ಯದ ರೈಲು ಯೋಜನೆ ಕಾರ್ಯಗತಕ್ಕೆ 7500 ಕೋಟಿ ಅನುದಾನ ನೀಡಲಾಗಿದೆ. ಒಟ್ಟಾರೆ ಮಹಿಳೆಯರು, ಯುವಕರು, ಕೃಷಿ, ಬಡವರು, ಶ್ರಮಿಕರು ಹಾಗೂ ಸಮಾಜದ ಎಲ್ಲಾ ವರ್ಗದ ಏಳಿಗೆಗಾಗಿ ಮಂಡಿಸಿದ ಬಜೆಟ್ ಇದಾಗಿದೆ. ಭವ್ಯ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಂಡಿಸಿದ ಬಜೆಟ್ ಇದು ಎಂದು ಸಚಿವ ಸೋಮಣ್ಣ ಹೊಗಳಿದ್ದು, ದೂರ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಎಂದು ಕೇಂದ್ರ ಸಚಿವ ಸೋಮಣ್ಣ ಬಣ್ಣಿಸಿದ್ದಾರೆ.
ಇದನ್ನೂ ಓದಿ : ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಪ್ರಕೃತಿ ಪ್ರೊಡಕ್ಷನ್ಸ್…!