ಕೊರೋನಾ ಎಂಬ ಮಹಾಮಾರಿ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತು. ಅಷ್ಟೇ ಅಲ್ಲದೆ ಆ ಒಂದು ರೋಗದಿಂದ ಮುಕ್ತಿ ಪಡೆಯಲು ಹಲವು ವರ್ಷಗಳೇ ಬೇಕಾಯಿತು. ಇದೀಗ ಕೊರೊನಾ ವೈರಸ್ ನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಮಾರಣಾಂತಿಕ ಕಾಯಿಲೆಯ ಬಗ್ಗೆ ಎಚ್ಚರಿಕೆ ನೀಡಿದೆ.
ಹೌದು, ಜಗತ್ತಿಗೆ ‘ಬ್ಲೀಡಿಂಗ್ ಐ’ ವೈರಸ್ ಎಂಬ ಹೊಸ ವೈರಸ್‌ನ ಕಾಟ ಶುರುವಾಗಿದೆ. ಈ ವೈರಸ್ ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿದ್ದು, ಹೆಚ್ಚಿನ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗ್ತಿದೆ. ಮಾರ್ಬರ್ಗ್ ಎಂದು ವೈದ್ಯಕೀಯವಾಗಿ ಕರೆಯಲಾಗುವ ಈ ‘ಬ್ಲೀಡಿಂಗ್ ಐ’ ವೈರಸ್‌ಗೆ ಈಗಾಗಲೇ ರುವಾಂಡಾದಲ್ಲಿ 15 ಜನರು ಬಲಿಯಾಗಿದ್ದು, ನೂರಾರು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಬ್ಲೀಡಿಂಗ್ ಐ ವೈರಸ್ ಒಂದು ರೀತಿಯ ಸೋಂಕಾಗಿದ್ದು, ಇದು ಸಂಭವಿಸಿದಾಗ, ಕಣ್ಣುಗಳಿಂದ ರಕ್ತ ಹೊರಬರಬಹುದು. ಸಾವಿನ ಅಪಾಯ ಹೊಂದಿರುವ ಈ ‘ಬ್ಲೀಡಿಂಗ್ ಐ’ ವೈರಸ್ ಅತ್ಯಂತ ಮಾರಣಾಂತಿಕವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗ್ಲೇ ಎಂಫಾಕ್ಸ್ ವೈರಸ್‌ಗಳಿಂದ ಹೋರಾಡುತ್ತಿರುವ ಆಫ್ರಿಕನ್ ದೇಶಗಳಿಗೆ ಈ ರೋಗ ಬೇಗ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಮಾರ್ಬರ್ಗ್ ವೈರಸ್‌ನ ಲಕ್ಷಣಗಳು :
- ಜ್ವರ, ತಲೆನೋವು
- ವಿಪರೀತ ಆಯಾಸ
- ದೇಹದ ನೋವು ಮತ್ತು ಸ್ನಾಯುಗಳಲ್ಲಿ ನೋವು
- ಇದೆಲ್ಲಾ ಕಾಣಿಸಿಕೊಂಡ ಮೂರನೇ ದಿನ, ಅತಿಸಾರ, ಹೊಟ್ಟೆಯಲ್ಲಿ ಸೆಳೆತ, ವಾಕರಿಕೆ, ವಾಂತಿ ಮತ್ತು ತುರಿಕೆ ಇಲ್ಲದ ದದ್ದು ಮುಂತಾದ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
- ಐದನೇ ದಿನ ಮೂಗು, ಒಸಡುಗಳು, ಯೋನಿ, ಕಣ್ಣು, ಬಾಯಿ ಮತ್ತು ಕಿವಿ, ವಾಂತಿ, ಮಲದಲ್ಲಿ ರಕ್ತಸ್ರಾವ ಆಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ.. ಮಾರ್ಬರ್ಗ್ ವೈರಸ್ ಸೋಂಕಿತ ಜನರ ಸಂಪರ್ಕದಿಂದ ಹರಡುತ್ತದೆ. ಇದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವೈರಸ್ ಸೋಂಕಿತ ಪ್ರದೇಶಗಳಿಗೆ ಹೋಗಬಾರದು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಆಗಾಗ ಕೈ ತೊಳೆಯುವ ಮೂಲಕ ವೈರಸ್ನಿಂದ ದೂರ ಇರಬಹುದು. ಸೋಂಕಿತ ವ್ಯಕ್ತಿ ನೇರ ಸಂಪರ್ಕಕ್ಕೆ ಬರದಂತೆ ತಪ್ಪಿಸಿಕೊಳ್ಳಬೇಕು. ಈ ಮುನ್ನೆಚ್ಚರಿಕೆಗಳೇ ಇದಕ್ಕೆ ಮದ್ದಾಗಿದೆ.
ಇದನ್ನೂ ಓದಿ : ನಮ್ಮಲ್ಲಿ ಯಾವುದೇ ಬಿಕ್ಕಟ್ಟುಗಳಿಲ್ಲ, ಸದನದಲ್ಲಿ ಒಟ್ಟಾಗಿಯೇ ಹೋರಾಟ ಮಾಡ್ತೀವಿ – ಅಶ್ವತ್ಥ್ ನಾರಾಯಣ್..!