ಹೈದರಾಬಾದ್ : ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದ್ದ ಭಾರತ, ಇದೀಗ ಕೊನೆಯ ಪಂದ್ಯದಲ್ಲೂ ಬಾಂಗ್ಲಾವನ್ನು ಮಣಿಸಿದೆ. ಹೈದರಾಬಾದ್ನಲ್ಲಿ ನಿನ್ನೆ ನಡೆದ ಈ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ ತಂಡವನ್ನು ಬರೋಬ್ಬರಿ 133 ರನ್ಗಳಿಂದ ಸೋಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಭಾರತ ನೀಡಿದ್ದ 298 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಿಡಿಲಬ್ಬರದ ಶತಕ ಸಿಡಿಸಿದ ಸಂಜು : ಬಹಳ ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಸಂಜು ಸ್ಯಾಮ್ಸನ್ಗೆ ನಿನ್ನೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿದ್ದರಷ್ಟೇ ಸಂಜುಗೆ ಮುಂದಿನ ಸರಣಿಯಲ್ಲಿ ಅವಕಾಶ ಸಿಗುತ್ತಿತ್ತು. ಇಲ್ಲದಿದ್ದರೆ ಸಂಜು ಸ್ಯಾಮ್ಸನ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಭಾಗಶಃ ಅಂತ್ಯವಾಗುತ್ತಿತ್ತು. ಆದರೆ ತನಗೆ ಸಿಕ್ಕಿದ ಕೊನೆಯ ಅವಕಾಶವನ್ನು ಸ್ಮರಣೀಯಗೊಳಿಸಿದ ಸಂಜು ದಾಖಲೆಯ ಶತಕ ಸಿಡಿಸಿದರು.
ಆರಂಭದಿಂದಲೂ ಅಬ್ಬರಿಸಲು ಶುರು ಮಾಡಿದ್ದ ಸಂಜು, ಏಳನೇ ಓವರ್ನಲ್ಲಿ 3 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸುವ ಮೂಲಕ ತಮ್ಮ ಅರ್ಧಶತಕವನ್ನು ಕೇವಲ 22 ಎಸೆತಗಳಲ್ಲಿ ಪೂರೈಸಿದರು. ಅರ್ಧಶತಕದ ನಂತರ ಮತ್ತಷ್ಟು ರೌದ್ರಾವತಾರ ತಾಳಿದ ಸಂಜು ರಿಷಾದ್ ಹೊಸೇನ್ ಎಸೆದ 10ನೇ ಓವರ್ನಲ್ಲಿ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಸಂಚಲನ ಮೂಡಿಸಿದರು. ಬಳಿಕ ಕೇವಲ 40 ಎಸೆತಗಳಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಸಂಜು ಸಿಡಿಸಿದ ಈ ಶತಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಸಂಜು ಭಾರತದ ಪರ ದಾಖಲಾದ ಎರಡನೇ ವೇಗದ ಶತಕವಾಗಿದೆ. 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 35 ಬಾಲ್‌ಗಳಿಗೆ 75 ರನ್ (8 ಫೋರ್, 5 ಸಿಕ್ಸರ್) ಸಿಡಿಸಿ ಮಿಂಚಿದರು.
ಇದನ್ನೂ ಓದಿ : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ನಟ ಸಂಜಯ್ ದತ್..!