ಬೆಂಗಳೂರು : ರಾಜ್ಯದಲ್ಲಿ ಮುಡಾ ಹಗರಣವನ್ನೇ ಮೀರಿಸೋ ಮತ್ತೊಂದು ಬಹುದೊಡ್ಡ ಹಗರಣ ಬೆಳಕಿಗೆ ಬಂದಿದ್ದು, ಸರ್ಕಾರದ ಮೂಗಿನಡಿಯಲ್ಲೇ ಬರೋಬ್ಬರಿ 600 ಕೋಟಿ ರೂ. ಭೂ ಹಗರಣ ವಂಚನೆ ಎಸಗಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಗರದ ಪ್ರಖ್ಯಾತ ಬಿಲ್ಡರ್ ‘ನಿರ್ಮಾಣ್ ಶೆಲ್ಟರ್ಸ್’ ಪ್ರೈ.ಲಿ. ವಿರುದ್ಧ ದೂರು ದಾಖಲಾಗಿದ್ದು, ಈ ಕಂಪನಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜ್ಯ ಸರ್ಕಾರಕ್ಕೆ ಸುಮಾರು 600 ಕೋಟಿ ರೂ. ವಂಚಿಸಿದೆ ಎನ್ನಲಾಗಿದೆ.
ಬೆಂಗಳೂರಿನ ಜಿಗಣಿ ಬಳಿಯ ಕಲ್ಲಬಾಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂ ಹಗರಣ ನಡೆದಿದ್ದು, CA ಸೈಟ್, ಪಾರ್ಕ್ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ‘ನಿರ್ಮಾಣ್ ಶೆಲ್ಟರ್ಸ್’ ಕೋಟಿ ಕೋಟಿಗೆ ಮಾರಾಟ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ ಆನೇಕಲ್ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದು ಬುಕ್ಕಸಾಗರ ಗ್ರಾಮದಲ್ಲಿ 400 ಎಕ್ರೆ ವಿಸ್ತೀರ್ಣದಲ್ಲಿ ಬೃಹತ್ ಲೇಔಟ್ ನಿರ್ಮಾಣ ಮಾಡಲಾಗಿದೆ.
ನಿರ್ಮಾಣ್ ಶೆಲ್ಟರ್ಸ್ನ MDಯಾಗಿರುವ ಲಕ್ಷ್ಮಿ ನಾರಾಯಣ್, ಡೈರೆಕ್ಟರ್ ಆಗಿರೋ ಶಶಿ ಪಾಟೀಲ್, ತೇಜವತಿ ಎಂಬವರು ವಂಚನೆ ಎಸಗಿದ್ದು, ಇದ್ರಲ್ಲಿ ಡೈರೆಕ್ಟರ್ ಶಶಿ ಪಾಟೀಲ್ ವಿರುದ್ಧ ನಕಲಿ ದಾಖಲೆ ಸೃಷ್ಟಿ ಮಾಡಿಕೊಡ್ತಿದ್ದ ಆರೋಪ ಕೇಳಿಬಂದಿದೆ. ರಸ್ತೆಗೆ ಹೊಂದಿಕೊಂಡಿರುವ CA ಸೈಟ್ಗಳನ್ನು ಕಮರ್ಷಿಯಲ್ ಎಂದು ದಾಖಲೆ ಸೃಷ್ಟಿಸಿ, CA ಸೈಟ್ಗಳಲ್ಲಿ ಕಟ್ಟಡಗಳನ್ನು ಕಟ್ಟಿ ‘ನಿರ್ಮಾಣ್ ಶೆಲ್ಟರ್ಸ್’ ಬಾಡಿಗೆಗೆ ಬಿಟ್ಟಿದ್ದು, ಪಾರ್ಕ್ಗಿಟ್ಟ ಜಾಗವನ್ನೂ ಒತ್ತುವರಿ ಮಾಡಿ ಸರ್ವೇ ನಂಬರ್ ಬದಲಿಸಿ ಅಕ್ರಮವಾಗಿ ಮಾರಾಟ ಮಾಡ್ತಿದೆ ಎನ್ನಲಾಗಿದೆ.
ಹೀಗೆಯೇ ‘ನಿರ್ಮಾಣ್ ಶೆಲ್ಟರ್ಸ್’ ವಿರುದ್ಧ ಸುಮಾರು 400 ಎಕ್ರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಿರೋ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಂಚಾಯ್ತಿಗೆ ದೂರು ಕೊಟ್ರೂ ಅಧಿಕಾರಿಗಳು ಇನ್ನು ತೆರವು ಮಾಡದೆ ಸೈಲೆಂಟಾಗಿ ಕುಳಿತಿದ್ದಾರೆ. ಅಧಿಕಾರಿಗಳ ಈ ನಡೆಯ ಬೆನ್ನಲ್ಲೇ, ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ PDO ‘ನಿರ್ಮಾಣ್’ ಜೊತೆ ಕೈ ಜೋಡಿಸಿದ್ರಾ ಎಂಬ ಅನುಮಾನಗಳು ಶುರುವಾಗಿದ್ದು, 600 ಕೋಟಿ ಲೂಟಿಯಲ್ಲಿ ವಿವಿಧ ಅಧಿಕಾರಿಗಳಿಗೆ 100 ಕೋಟಿಗೂ ಹೆಚ್ಚು ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಈ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ತಾಲೂಕು ಪಂಚಾಯತ್ CEO, ಜಿ.ಪಂ CEOಗಳೇ ತಕ್ಷಣ ಕ್ರಮ ಕೈಗೊಳ್ಳಬೇಕು, ‘ನಿರ್ಮಾಣ್’ ಜೊತೆ ಶಾಮೀಲಾಗಿರೋ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ‘ನಿರ್ಮಾಣ್ ಶೆಲ್ಟರ್ಸ್’ ನಿರ್ಮಿಸಿದ ಅಕ್ರಮ ಕಟ್ಟಡಗಳನ್ನು ಈ ಕೂಡಲೇ ಡೆಮಾಲಿಷ್ ಮಾಡಿ ಎಂಬ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ : ನೀವುಗಳೇ ಬಿಗ್ಬಾಸ್ ಆಗೋಕೆ ಹೋಗ್ಬೇಡಿ – ಸ್ಪರ್ಧಿಗಳಿಗೆ ಸುದೀಪ್ ಖಡಕ್ ವಾರ್ನಿಂಗ್..!