ತಿರುವನಂತಪುರಂ : ಕೊಡಗಿನಲ್ಲಿ 2018ರಲ್ಲಿ ನಡೆದ ಮಹಾ ಗುಡ್ಡ ಕುಸಿತದಂತೆ ಇಂದು ಕೇರಳದಲ್ಲೂ ದೊಡ್ಡ ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ಜಲಸ್ಫೋಟದಿಂದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಮಹಾ ಗುಡ್ಡ ಕುಸಿದಿದ್ದು, ಈ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ನಸುಕಿನ ಜಾವ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದರೆ, ಮುಂಜಾನೆ 4:10ರ ವೇಳೆ ಎರಡನೇ ಬಾರಿ ಸಂಭವಿಸಿದೆ. ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು ನೋವಿನ ಪ್ರಮಾಣ ಇನ್ನು ಏರಿಕೆಯಾಗುವ ಸಾಧ್ಯತೆಯಿದೆ.
40 ಮನೆಗಳಿದ್ದ ಮುಂಡಕೈ ಗ್ರಾಮದ ಮೇಲೆ ಗುಡ್ಡ ಬಿದ್ದಿದ್ದು, NDRF, ಕೇರಳ ವಿಕೋಪ ನಿರ್ವಹಣಾ ತಂಡ ಸ್ಥಳಕ್ಕೆ ಭೇಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈ ಜಾಗದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಆಗುತ್ತಿದ್ದು, ಹೀಗಾಗಿ ಘಟ್ಟ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದಿದೆ ಎಂದು ಹೇಳಲಾಗುತ್ತಿದೆ. ಶಿರೂರು ಗುಡ್ಡ ಮಾದರಿಯಲ್ಲೇ ಈ ದುರಂತ ಸಂಭವಿಸಿದ್ದು, 40 ಮನೆಗಳಿದ್ದ ಗ್ರಾಮದಲ್ಲಿ ಈಗ 10 ಮನೆ ಮಾತ್ರ ಕಾಣಿಸುತ್ತಿವೆ ಎಂದು ತಿಳಿದು ಬಂದಿದೆ.
ಇನ್ನು, ವಿಚಾರ ತಿಳಿಯುತ್ತಿದ್ದಂತೆ ಕೇರಳ ಸಿಎಂ ಪಿಣರಾಯ್ಗೆ ಪ್ರಧಾನಿ ಮೋದಿ ಫೋನ್ ಮಾಡಿ ಗುಡ್ಡ ಕುಸಿತದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ದುರಂತ ವಿಚಾರ ತಿಳಿಯುತ್ತಿದ್ದಂತೆ ಫೋನ್ ಮಾಡಿದ ಪ್ರಧಾನಿ ಮೋದಿ, ದುರಂತದಲ್ಲಿ ಏನಾಗಿದೆ, ಕೇಂದ್ರದಿಂದ ಏನಾದ್ರೂ ಸಹಕಾರ ಬೇಕಾ ಎಂಬೆಲ್ಲಾ ಮಾತುಕತೆ ನಡೆಸಿದ್ದಾರೆ. ಸೇನೆ ಸೇರಿದಂತೆ ಯಾವುದೇ ನೆರವು ಬೇಕಿದ್ದರೂ ಕೊಡ್ತೇವೆ.
ಜೀವ ಉಳಿಸುವತ್ತ ಕ್ರಮ ಕೈಗೊಳ್ಳಿ ಎಂದು ಫೋನ್ನಲ್ಲೇ ಮೋದಿ ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವ ಜೆಪಿ ನಡ್ಡಾ ಸೇರಿ ಹಲವು ಸಚಿವರಿಂದಲೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಇದನ್ನೂ ಓದಿ : ವಿಜಯನಗರ : ಶಾಲೆಯಲ್ಲಿ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು..!