ಬಂಟ್ವಾಳ : ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿ ಒಂದು ವಾರದಿಂದ ಬಿಡುವು ಕೊಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ನೇತ್ರಾವತಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನೇತ್ರಾವತಿ ನದಿಯ ರುದ್ರ ರಮಣೀಯ ದೃಶ್ಯ ಸ್ಥಳೀಯರೊಬ್ಬರ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲಿ ನೋಡಿದರಲ್ಲಿ ಪ್ರವಾಹದ ನೀರು ಉಕ್ಕಿ ಹರಿಯುತ್ತಿದೆ. ಬಂಟ್ವಾಳದ ತಗ್ಗು ಪ್ರದೇಶವಾದ ಪಾಣೆಮಂಗಳೂರು, ಆಲಡ್ಕ ಮೊದಲಾದೆಡೆ ಮನೆಗಳಿಗೆ ನದಿ ನೀರು ನುಗ್ಗಿದ್ದು, ಮುಂಜಾಗ್ರತಾ ಕ್ರಮವಾಗಿ ಆಲಡ್ಕ ಪರಿಸರದ 10 ಕುಟುಂಬಗಳನ್ನು ತೆರವುಗೊಳಿಸಲಾಗಿದೆ.
ಸದ್ಯ ಇದುವರೆಗೆ ಯಾವುದೇ ಅಪಾಯ ಸಂಭವಿಸಿಲ್ಲ. ತಾಲೂಕಿನ ವಿವಿಧೆಡೆ ತೋಟಗಳಲ್ಲಿ ನೀರು ತುಂಬಿಕೊಂಡಿದ್ದು, ಅಪಾರ ಕೃಷಿ ಹಾನಿ ಸಂಭವಿಸಿದೆ. ಇತಿಹಾಸ ಪ್ರಸಿದ್ಧ ಅಜಿಲ ಮೊಗರು ಜುಮಾ ಮಸೀದಿ ವಠಾರದಲ್ಲಿ ನೀರು ಆವರಿಸಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೆರೆ ಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಆಲಡ್ಕಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಇಲ್ಲಿನ ತಾಲೂಕು ಆಡಳಿತ ಹಾಗೂ ಪೋಲೀಸರ ಜೊತೆಗೆ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನೀರು ನುಗ್ಗುವ ಲಕ್ಷಗಳು ಕಂಡು ಬರುವ ಮನೆಗಳನ್ನು ಹಗಲು ಹೊತ್ತಿನಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡು ವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : ಮೈಸೂರು : ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಬೃಹತ್ ಹೊಂಡ ಪತ್ತೆ – ವಾಹನಗಳ ಸಂಚಾರಕ್ಕೆ ನಿರ್ಬಂಧ..