ಬೆಂಗಳೂರು : ಬೆಳಂಬೆಳಗ್ಗೆ ಬೆಂಗಳೂರು, ಗದಗ, ಕಲಬುರಗಿ ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ 5 ಕಡೆ ದಾಳಿ ನಡೆಸಿ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 10 ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಗದಗ ಜಿಲ್ಲಾ ಪಂಚಾಯತಿ ಎಸ್ಡಿಎ ಲಕ್ಷ್ಮಣ ಕರ್ಣಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಗದಗ ನಗರದ ರಾಧಾಕೃಷ್ಣ ಬಡಾವಣೆಯ ಮನೆ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಗದಗ, ಗಜೇಂದ್ರಗಡ, ಹಾವೇರಿಯಲ್ಲಿ ಕರ್ಣಿಗೆ ಸಂಬಂಧಿಸಿದ ಮನೆ, ಆಸ್ತಿ ಪರಿಶೀಲನೆ ಮಾಡಿದ್ದಾರೆ. ಆದಾಯ ಮೀರಿ ಆಸ್ತಿಗಳಿಗೆ ದೂರಿನ ಮೇಲೆ ಲೋಕಾಯುಕ್ತ ಎಸ್ ಪಿ ಹನುಮಂತ್ ರಾಯ, ಡಿಎಸ್ ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪಿಎಸ್ ಐ ಎಸ್ ಎಸ್ ತೇಲಿ, ಪಿಜಿ ಕವಟಗಿ ತಂಡದಿಂದ ಕಡತಗಳ ಪರಿಶೀಲನೆ ನಡೆಯುತ್ತಿದೆ.
ಕೊಪ್ಪಳದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ ಅಗಡಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಮುಂಜಾನೆ ಮನೆ ಮೇಲೆ ದಾಳಿ ನೆಡೆಸಿದ ಲೋಕಾಯುಕ್ತ ಪೊಲೀಸರು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೊಪ್ಪಳದ ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿಯಾಗಿದೆ.
ಕಲಬುರಗಿಯಲ್ಲಿ ಭ್ರಷ್ಟಾಧಿಕಾರಿಗಳಿಗೆ ಲೋಕಾ ಶಾಕ್ ನೀಡಿದ್ದು, ಮಹಾನಗರ ಪಾಲಿಕೆ ಉಪ ಆಯುಕ್ತ ಆರ್ ಪಿ ಜಾಧವ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಹಿನ್ನೆಲೆ ಉದಯನಗರದಲ್ಲಿರುವ ಆರ್ ಪಿ ಜಾಧವ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ಅರಣ್ಯ ಇಲಾಖೆ ACF ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಿರಿಯೂರು ಉಪ ವಿಭಾಗದ ACF ಸುರೇಶ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಚಳ್ಳಕೆರೆ ನಿವಾಸ, ಹೊಸ ಬ್ಯಾಡರಹಟ್ಟಿ ಮನೆ, ಬೆಂಗಳೂರು ನಿವಾಸ, ಹಿರಿಯೂರು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿ, ನಾಲ್ಕು ಕಡೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮದ್ದೂರಿನಲ್ಲಿ ನಾಳೆ ಸರ್ಕಾರಿ ಗೌರವದೊಂದಿಗೆ ಎಸ್.ಎಂ. ಕೃಷ್ಣ ಅಂತ್ಯಸಂಸ್ಕಾರ..!