ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಡಿ ಭಾರೀ ಮಳೆಯಾಗಿದೆ. ರಾತ್ರಿ 8.30ರ ಸುಮಾರಿಗೆ ಶುರುವಾದ ಅಬ್ಬರದ ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾರ್ಪೊರೇಷನ್, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಕಲಾಸಿಪಾಳ್ಯ, ವಿಲ್ಸನ್ ಗಾರ್ಡನ್ ಸೇರಿದಂತೆ ಬಹುತೇಕ ನಗರದಾದ್ಯಂತ ಅಬ್ಬರದ ಮಳೆ ಸುರಿದಿದೆ. ಪರಿಣಾಮ ಹಲವೆಡೆ ಪ್ರಮುಖ ರಸ್ತೆಗಳಿಗೆ ಮಳೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ನಗರದ ಹಲವು ಏರಿಯಾಗಳು ಕೆರೆಯಂತೆ ಬದಲಾಗಿತ್ತು.
ವಿಲ್ಸನ್ ಗಾರ್ಡನ್ ಸುತ್ತ ಭಾರಿ ಮಳೆಯಿಂದಾಗಿ ರಸ್ತೆ ಕೆರೆಯಂತಾಗಿದ್ದವು. ಸುಮಾರು ಎರಡು ಗಂಟೆಯಿಂದ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿತ್ತು. ಇನ್ನು ತಗ್ಗು ಪ್ರದೇಶದ ರಸ್ತೆಗಳಲ್ಲಿ ಮಳೆ ನೀರು ನುಗ್ಗಿದ್ದು, ಭಾರೀ ಮಳೆಯಿಂದ ನಗರದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಮೆಜೆಸ್ಟಿಕ್ ರೈಲ್ವೆ ಸ್ಟೇಶನ್ ಒಳಗಡೆ ನೀರು ಸೋರಿಕೆಯಾಗಿ ಜನರು ಪರದಾಡಿದ್ದಾರೆ. ನಾಗವಾರ ಜಂಕ್ಷನ್‌ನಲ್ಲಿ ಮಳೆಯಿಂದಾಗಿ ವಾಟರ್ ಲಾಗಿಂಗ್ ತುಂಬಿದ್ದು, ಹೆಬ್ಬಾಳ ಕಡೆಗೆ ನಿಧಾನಗತಿಯ ಸಂಚಾರ ಇತ್ತು. ಬಳಿಕ ಟ್ರಾಫಿಕ್ ಪೊಲೀಸರು ಖುದ್ದು ಫೀಲ್ಡಿಗಿಳಿದು ನೀರು ಕ್ಲಿಯರ್ ಮಾಡಿದ್ದಾರೆ.
ಶಾಂತಿನಗರ ಬಸ್ ನಿಲ್ದಾಣದ ಮುಂಭಾಗ ರಸ್ತೆ ಸಂಪೂರ್ಣ ಜಲಮಯವಾಗಿತ್ತು. ಕೋರಮಂಗಲ ತೆರಳುವ ರಸ್ತೆ ತುಂಬ ಮಳೆ ನೀರು ತುಂಬಿತ್ತು. ಮೋರಿ ನೀರು ಬ್ಲಾಕ್ ಆಗಿ ಅವಾಂತರ ಸೃಷ್ಟಿಯಾಗಿತ್ತು.
ಇದನ್ನೂ ಓದಿ : ಮುಂಬೈನಲ್ಲಿ ಪ್ಯಾನ್ ವರ್ಲ್ಡ್ ಮಾರ್ಟಿನ್ ಟ್ರೈಲರ್ ಔಟ್..! ಆಕ್ಷನ್ ಪ್ರಿನ್ಸ್ ರಗಡ್ ಎಂಟ್ರಿ, ಖಡಕ್ ಲುಕ್ ಗೆ ಫ್ಯಾನ್ಸ್ ಫಿದಾ..!