ಬೆಂಗಳೂರು : ಏಪ್ರಿಲ್ 1ರಿಂದ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಹೆದ್ದಾರಿ ಲೋಕಾರ್ಪಣೆಗೊಂಡ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಟೋಲ್ ದರ ಹೆಚ್ಚಳವಾಗಿದ್ದು, ಇದೀಗ ಮೂರನೇ ದರ ನಿಗದಿಯಾಗಿದೆ. ಈಗಾಗಲೇ ದುಪ್ಪಟ್ಟು ಟೋಲ್ ಶುಲ್ಕ ಹೆಚ್ಚಳದಿಂದ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೀಗ, ಮತ್ತೆ ಟೋಲ್ ಶುಲ್ಕ ಹೆಚ್ಚಳವಾಗುತ್ತಿದ್ದು, ಮತ್ತೊಮ್ಮೆ ಜನಕ್ರೋಶಕ್ಕೆ ತುತ್ತಾಗುತ್ತಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶುಲ್ಕವನ್ನು ಹೆಚ್ಚಿಸಿದ್ದು, ಸಗಟು ಬೆಲೆ ಸೂಚ್ಯಂಕದ ಪ್ರಕಾರ, ಟೋಲ್ ಶುಲ್ಕವನ್ನು 3% ಏರಿಸಲಾಗಿದೆ. ಪರಿಷ್ಕೃತ ಶುಲ್ಕವು 2024ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹಿಂದೆ 2023ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಶುಲ್ಕ ಹೆಚ್ಚಿಸಲಾಗಿತ್ತು. ಟೋಲ್ ದರ ಹೆಚ್ಚಳದ ವಿರುದ್ಧ ವಾಹನ ಸವಾರರು ಕಿಡಿಕಾರಿದ್ದರು. ಆದರೂ, ಜೂನ್‌ನಲ್ಲಿ ಮತ್ತೆ 22% ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಶುಲ್ಕ ಹೆಚ್ಚಳ ಮಾಡಲಾಗಿದೆ.
ಯಾವ್ಯಾವ ವಾಹನಗಳಿಗೆ ಎಷ್ಟು? ಹೊಸ ದರದಂತೆ ಬೆಂಗಳೂರು-ನಿಡಘಟ್ಟ ನಡುವಿನ ಎಕ್ಸ್‌ಪ್ರೆಸ್-ವೇ ಬಳಕೆಗೆ ಕಾರುಗಳು,ವ್ಯಾನ್‌ಗಳು,ಜೀಪ್‌ಗಳ ಸವಾರರು ಏಕಮುಖ ಪ್ರಯಾಣಕ್ಕೆ 170 ರೂ. ಮತ್ತು 24 ಗಂಟೆಗಳ ಒಳಗೆ ಹಿಂದಿರುಗುವ ದ್ವಿಮುಖ ಪ್ರಯಾಣಕ್ಕೆ 255 ನಿಗದಿಯಾಗಿದೆ. ಶುಲ್ಕ ಪರಿಷ್ಕರಣೆಗೂ ಮುನ್ನ ಟೋಲ್ ದರವು ಏಕಮುಖ ಪ್ರಯಾಣಕ್ಕೆ 165 ರೂ. ಮತ್ತು ದ್ವಿಮುಖ ಪ್ರಯಾಣಕ್ಕೆ 250 ರೂ. ಇತ್ತು. ಇನ್ನು, ಲಘು ವಾಣಿಜ್ಯ ವಾಹನಗಳು, ಸರಕು ವಾಹನಗಳು ಹಾಗೂ ಮಿನಿ ಬಸ್‌ಗಳಿಗೆ ಏಕಮುಖ ಪ್ರಯಾಣ 275 ರೂ.ಮತ್ತು ದ್ವಿಮುಖ ಪ್ರಯಾಣ 425 ನಿಗದಿಯಾಗಿದೆ. ಇದು 270 ರೂ. ಮತ್ತು 405 ರೂ. ಇತ್ತು.
ಭಾರೀ ಟ್ರಕ್‌ಗಳು ಮತ್ತು ಬಸ್‌ಗಳಿಗೆ ಏಕಮುಖ ಪ್ರಯಾಣ 580 ರೂ. ಮತ್ತು ದ್ವಿಮುಖ ಪ್ರಯಾಣ 870 ರೂ. ನಿಗದಿಯಾಗಿದೆ. ಅದೇ ರೀತಿ ನಿಡಘಟ್ಟ ಮತ್ತು ಮೈಸೂರು ನಡುವಿನ ಎಕ್ಸ್‌ಪ್ರೆಸ್-ವೇ ಬಳಕೆಗೆ ಕಾರುಗಳು,ವ್ಯಾನ್‌ಗಳು,ಜೀಪ್‌ಗಳಿಗೆ ಏಕಮುಖ ಪ್ರಯಾಣ 160 ರೂ. ಮತ್ತು ದ್ವಿಮುಖ ಪ್ರಯಾಣ 240 ರೂ. ನಿಗದಿಯಾಗಿದೆ. ಒಟ್ಟಾರೆಯಾಗಿ ಬೆಂಗಳೂರು-ಮೈಸೂರು ನಡುವಿನ ಏಕಮುಖ ಪ್ರಯಾಣಕ್ಕೆ ಕಾರುಗಳು 330 ರೂ. ಭರಿಸಬೇಕಾಗಿದೆ.
ಎಕ್ಸ್‌ಪ್ರೆಸ್ ವೇ ಮಾತ್ರವಲ್ಲದೆ, ಬೆಂಗಳೂರಿನ ‘ಸ್ಯಾಟಲೈಟ್ ಟೌನ್ ರಿಂಗ್ ರೋಡ್’ನ ಟೋಲ್ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಈ ರಸ್ತೆಯ ದೊಡ್ಡಬಳ್ಳಾಪುರ-ಹೊಸಕೋಟೆ ನಡುವಿನ 39.6-ಕಿಮೀ ಪ್ರಯಾಣಕ್ಕೆ ಆರು ತಿಂಗಳ ಹಿಂದೆಯಷ್ಟೇ ಟೋಲ್ ಶುಲ್ಕ ನಿಗದಿ ಮಾಡಲಾಗಿತ್ತು. ಇದೀಗ ಮತ್ತೆ ಶುಲ್ಕವನ್ನು ಹೆಚ್ಚಿಸಲಾಗಿದೆ.
ಈ ರಸ್ತೆಯಲ್ಲಿ ಕಾರುಗಳು,ವ್ಯಾನ್‌ಗಳು.ಜೀಪ್‌ಗಳಿಗೆ ಏಕಮುಖ ಪ್ರಯಾಣ 80 ರೂ. ಮತ್ತು ದ್ವಿಮುಖ ಪ್ರಯಾಣಕ್ಕೆ 120 ರೂ., ಲಘು ವಾಣಿಜ್ಯ ವಾಹನಗಳು, ಸರಕು ವಾಹನಗಳು ಮತ್ತು ಮಿನಿಬಸ್‌ಗಳಿಗೆ ಏಕಮುಖ ಪ್ರಯಾಣ 130 ರೂ. ದ್ವಿಮುಖ ಪ್ರಯಾಣ 200 ರೂ., ಹಾಗೂ ಭಾರೀ ವಾಹನಗಳಿಗೆ ಏಕಮುಖ 275 ರೂ. ಮತ್ತು ದ್ವಿಮುಖ ಪ್ರಯಾಣ 415 ರೂ. ನಿಗದಿಯಾಗಿದೆ.
ಇದನ್ನೂ ಓದಿ : ಕೊರೋನಾದಲ್ಲಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲು ಸುಧಾಕರ್ ಸೋಲಬೇಕು : ಹೂಡಿ ವಿಜಯಕುಮಾರ್..!