ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಇಡೀ ಸಿಲಿಕಾನ್ ಸಿಟಿಯ ಜೀವನ ತತ್ತರಿಸಿ ಹೋಗಿದೆ. ಬೆಳಗಿನ ಜಾವ 3 ಗಂಟೆಯಿಂದ ಸತತ ಎರಡು ಗಂಟೆಗಳ ಕಾಲ ಜಡಿದ ಮಳೆಗೆ ನಗರದ ಪ್ರಮುಖ ಭಾಗಗಳು ಮುಳುಗಡೆ ಪೀಡಿತ ಪ್ರದೇಶಗಳಂತೆ ಭಾಸವಾಗುತ್ತಿವೆ.
ರಾತ್ರಿಯಿಡೀ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿದ್ದು,ಬಹುತೇಕ ರಸ್ತೆಗಳಲ್ಲಿ ಕೆಸರು ಎದ್ದಿದೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡೋಕೂ ಕಷ್ಟವಾಗಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಿಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಆಗಿದೆ. ಪರಿಣಾಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಆಗಿದೆ.
ಇನ್ನು ಮಳೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಪೂರ್ಣ ಜಲಾವೃತವಾಗಿತ್ತು. ಕೆರೆಯಂತಾದ ರಸ್ತೆಗಳಲ್ಲಿ ಮೀನುಗಳು ಪ್ರತ್ಯಕ್ಷವಾಗಿದೆ. ನೀರಲ್ಲೇ ಮೀನು ಹಿಡಿಯಲು ಜನರು ನಾ ಮುಂದು ತಾ ಮುಂದು ಎಂದು ಮೀನು ಹಿಡಿದಿದ್ದಾರೆ.
ಭಾರೀ ಗಾಳಿ ಮಳೆಗೆ ಮರಗಳು ಉರುಳಿ ಬಿದ್ದಿರುವ ಘಟನೆ ಕುಮಾರಕೃಪಾ ವೆಸ್ಟ್ ಸುಬ್ರಮಣ್ಯ ದೇವಸ್ಥಾನದ ಬಳಿ ನಡೆದಿದೆ. ಮರ ಉರುಳಿ ಬಿದ್ದ ಪರಿಣಾಮ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂ ಆಗಿದೆ. ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ಬಿಬಿಎಂಪಿ ತೆರವು ಮಾಡುತ್ತಿದೆ.
ಇನ್ನು ಮಾರುತಿ ಸೇವಾನಗರದಲ್ಲಿ ಬೆಳಗ್ಗೆ 7ಗಂಟೆಗೆ ಮೂವರು ಶಾಲಾಮಕ್ಕಳ ಮೇಲು ಮರ ಬಿದ್ದ ದಾರುಣ ಘಟನೆ ನಡೆದಿದೆ. ಅದರಲ್ಲಿ ಓರ್ವನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಎದೆ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿರೋ ಮಾಹಿತಿಯಿದೆ. ಬೈಕ್ ಹಾಗೂ ಪಾದಚಾರಿಗಳ ಮೇಲು ಮರ ಬಿದಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ಗೊತ್ತಾ?
- ಕೊಡಿಗೇಹಳ್ಳಿ – 61 ಮಿಮೀ
- ವಿವಿಪುರಂ – 57 ಮಿಮೀ
- ವಿದ್ಯಾಪೀಠ – 56 ಮಿಮೀ
- ಹಗದೂರು – 54 ಮಿಮೀ
- ಯಲಹಂಕ – 51 ಮಿಮೀ
- ಆರ್ ಆರ್ ನಗರ – 50 ಮಿಮೀ
- ವಿ ನಾಗೇನಹಳ್ಳಿ – 50 ಮಿಮೀ
- ಪುಲಿಕೇಶಿ ನಗರ – 49 mm
- ಅರೆಕರೆ – 48 ಮಿಮೀ
- ಹೆಚ್ ಎಸ್ ಆರ್ ಲೇಔಟ್ -45 ಮಿಮೀ
- ನಾಗಪುರ – 44 ಮಿಮೀ
- ಕಾಟನ್ ಪೇಟೆ – 43 ಮಿಮೀ
- ಚಾಮರಾಜಪೇಟೆ – 43 ಮಿಮೀ
- ಬಿಟಿಎಂ ಲೇಔಟ್ – 41 ಮಿಮಿ
- ಹೂಡಿ – 40 ಮಿಮೀ
ಇದನ್ನೂ ಓದಿ : ಸರ್ಕಾರದ ವಿರುದ್ಧ ಸಿಡಿದೆದ್ದ ಪ್ರಾಥಮಿಕ ಶಾಲಾ ಶಿಕ್ಷಕರು – ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ..!