ಪಿವಿ ಸಿಂಧು ತಮ್ಮ ಬದುಕಿನ ಹೊಸ ಪಯಣಕ್ಕೆ ಸಿದ್ಧರಾಗಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾಗಿರುವ ಬ್ಯಾಡ್ಮಿಂಟನ್ ತಾರೆ, ಶೀಘ್ರದಲ್ಲೇ ವಿವಾಹ ಆಗಲಿದ್ದಾರೆ. ಸಿಂಧು ಅವರ ತಂದೆ ಪಿವಿ ರಾಮಣ್ಣ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಡಿಸೆಂಬರ್ 22ರಂದು ರಾಜಸ್ಥಾನದ ‘ಲೇಕ್ ಸಿಟಿ’ ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಿಂಧು ಮದುವೆ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪಿವಿ ಸಿಂಧು ತೆಲಂಗಾಣದ ಯುವತಿಯಾಗಿದ್ದು, ವೆಂಕಟ ದತ್ತ ಸಾಯಿ ಎಂಬ ಉದ್ಯಮಿಯನ್ನು ಮದುವೆಯಾಗಲಿದ್ದಾರೆ. ಇವರು ಪ್ರಮುಖ ವ್ಯಾಪಾರೋದ್ಯಮ ಕುಟುಂಬಕ್ಕೆ ಸೇರಿದರಾಗಿದ್ದಾರೆ.
ಡಿಸೆಂಬರ್ 20ರಿಂದ ವಿವಾಹ ಕಾರ್ಯಕ್ರಮಗಳು ಆರಂಭವಾಗಲಿದ್ದು, ಡಿಸೆಂಬರ್ 22ರಂದು ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ಸಿಂಧು ವಿವಾಹ ನಡೆಯಲಿದೆ. ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಆರತಕ್ಷತೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು, ಕ್ರೀಡಾ ಪಟುಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಪಿವಿ ಸಿಂಧು ಅವರ ಸಾಧನೆ : ಪಿವಿ ಸಿಂಧು ಅವರು ಭಾರತ ಕಂಡ ಅತ್ಯುತ್ತಮ ಶಟ್ಲರ್ ಆಗಿದ್ದಾರೆ. ವಿಶ್ವ ಚಾಂಪಿಯನ್ ಶಿಪ್ನಲ್ಲಿ ಅವರು 2019ರಲ್ಲಿ ಚಿನ್ನವೂ ಸೇರಿದಂತೆ ಒಟ್ಟು 5 ಬಾರಿ ಪದಕ ಗೆದ್ದಿದ್ದಾರೆ. ಇನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದು ಬಾರಿ ಬೆಳ್ಳಿ ಪದಕ ಮತ್ತು ಮತ್ತೊಂದು ಬಾರಿ ಕಂಚಿನ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ. ಭಾರತದ ಪರ ನಿರಂತರ ಒಲಿಂಪಿಕ್ಸ್ ಪದಕ ಪಡೆದ ಸಾಧನೆ ಸಹ ಸಿಂಧು ಅವರ ಹೆಸರಿನಲ್ಲಿ ಇದೆ. 2016ರ ರಿಯೋ ಒಲಿಂಪಿಕ್ಸ್ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅವರು ಪದಕ ಬಾಚಿದ್ದಾರೆ. ಇನ್ನು ವಿಶ್ವ ಶಟಲ್ ಬ್ಯಾಡ್ಮಿಂಟನ್ ರ‍್ಯಾಂಕಿಂಗ್ ನಲ್ಲಿ ಅವರು 2017ರಲ್ಲಿ ತಮ್ಮ ಜೀವನಶ್ರೇಷ್ಠ 2ನೇ ಶ್ರೇಯಾಂಕದವರೆಗೆ ಏರಿದ್ದರು.
ಇದನ್ನೂ ಓದಿ : ಚಳಿಯಲ್ಲಿ ವಾಕಿಂಗ್ ಹೋಗೋ ಹೃದ್ರೋಗಿಗಳೇ ಎಚ್ಚರ – ವೈದ್ಯರ ಸಲಹೆ ಏನು ಗೊತ್ತಾ?