ದೆಹಲಿ : ದೆಹಲಿ ಆಪ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಅತಿಶಿ ಮರ್ಲೆನಾ ಸಿಂಗ್ ಅವರನ್ನು ದೆಹಲಿಯ ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಹಾಲಿ ಮುಖ್ಯಮಂತ್ರಿ ಹಾಗೂ ಆಪ್ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರೇ ಆತಿಷಿ ಅವರ ಹೆಸರನ್ನು ಪ್ರಸ್ತಾವ ಮಾಡಿದ್ದಾರೆ.
ದೆಹಲಿಯಲ್ಲಿ ಸತತ ಎರಡನೇ ಬಾರಿಗೆ ಆಪ್ ಸರ್ಕಾರ ಆಡಳಿತಕ್ಕೆ ಬಂದಿದ್ದು ಒಂಬತ್ತು ವರ್ಷದಿಂದ ಅರವಿಂದ ಕೇಜ್ರಿವಾಲ್ ಸಿಎಂ ಆಗಿದ್ದಾರೆ. ಆದರೆ ದೆಹಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಆನಂತರ ಆರು ತಿಂಗಳ ಕಾಲ ಜೈಲಿನಲ್ಲಿಯೇ ಇದ್ದ ಕೇಜ್ರಿವಾಲ್ ಮೂರು ದಿನದ ಹಿಂದೆಯಷ್ಟೇ ಬಿಡುಗಡೆಯಾಗಿದ್ದಾರೆ.
ನೈತಿಕ ಕಾರಣಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. ಈ ಕಾರಣದಿಂದ ಅವರು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಇಂದು ಸಂಜೆ ರಾಜೀನಾಮೆ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಇದರ ನಡುವೆ ಶಾಸಕಾಂಗ ಸಭೆಯಲ್ಲಿ ದೆಹಲಿಗೆ ಹೊಸ ಸಿಎಂ ಆಯ್ಕೆ ನಡೆದಿದೆ.
ಲೋಕೋಪಯೋಗಿ, ಶಿಕ್ಷಣ, ಸಂಸ್ಕೃತಿ ಸಚಿವೆಯಾಗಿರುವ ಅತಿಶಿ ಈ ಹಿಂದೆ ಡಿಸಿಎಂ ಸಿಸೋಡಿಯಾಗೆ ರಾಜಕೀಯ ಸಲಹೆಗಾರರಾಗಿದ್ದರು. ವಿದೇಶದಲ್ಲಿ ವ್ಯಾಸಂಗ ಮುಗಿಸಿ 2013ರಲ್ಲಿ ಎಎಪಿಗೆ ಸೇರಿದ್ದರು. 2020ರಲ್ಲಿ ಗೋವಾ ಎಲೆಕ್ಷನ್ ಉಸ್ತುವಾರಿ ಹೊತ್ತಿದ್ದ ಅತಿಶಿ 2019ರ ಲೋಕಸಭೆ ಎಲೆಕ್ಷನ್ನಲ್ಲಿ ಗೌತಮ್ ಗಂಭೀರ್ ಎದುರು ಸೋಲು ಕಂಡಿದ್ದರು. 2020ರ ಅಸೆಂಬ್ಲಿ ಎಲೆಕ್ಷನ್ನಲ್ಲಿ 11 ಸಾವಿರ ಮತಗಳಿಂದ ಗೆದ್ದು ಮೊದಲ ಪ್ರಯತ್ನದಲ್ಲೇ ಕೇಜ್ರಿವಾಲ್ ಸಂಪುಟ ಸೇರಿದ್ದರು.
ಇದನ್ನೂ ಓದಿ : ‘ರಮ್ಮಿ ಆಟ’ ಚಿತ್ರದ ಟ್ರೈಲರ್ ರಿಲೀಸ್ – ಸೆ.20ಕ್ಕೆ ಸಿನಿಮಾ ತೆರೆಗೆ..!