ಗುವಾಹಟಿ : ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದಿದೆ. ಪ್ರೇಯಸಿಯ ಕೊಲೆ ಬಳಿಕ ಅದೇ ಚಾಕುವಿನಿಂದ ಇರಿದುಕೊಂಡು ಪ್ರೇಮಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹತ್ಯೆಗೀಡಾದ ಮಹಿಳೆಯನ್ನು ಮೌಸುಮಿ ಗೊಗೊಯ್ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಭೂಪೇನ್ ದಾಸ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲೇಟ್ ಗೇಟ್ ಪ್ರದೇಶದ ಮಹಿಳೆಯ ನಿವಾಸದ ಹೊರಗೆ ಕೊಲೆ ನಡೆದಿದ್ದು, ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಆರೋಪಿ ಭೂಪೇನ್ ದಾಸ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಶೀಘ್ರದಲ್ಲೇ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆ ಮೌಸುಮಿ ಗೊಗೊಯ್ ಆ್ಯಪ್ ಮೂಲಕ ಬುಕ್ ಮಾಡಿದ್ದ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಆರೋಪಿ ಭೂಪೇನ್ ದಾಸ್ ತನ್ನ ಕಾರಿನಲ್ಲಿ ಬಂದು ಆಕೆಗೆ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಕೂಡ ಯಾವುದೇ ಪ್ರಯೋಜನವಾಗದೇ ಮೌಸುಮಿ ಗೊಗೊಯ್ ಕೊನೆಯುಸಿರು ಎಳೆದಿದ್ದಾರೆ.
ಗೊಗೊಯ್ ಅವರು ಈ ಹಿಂದೆ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಸಿಹಿಕಹಿ ಚಂದ್ರು ದಂಪತಿಯಿಂದ “ಪಾಠಶಾಲಾ” ಟೀಸರ್ ರಿಲೀಸ್..!