ದಂಬುಲ್ಲಾ : ದಾಖಲೆಯ 7 ಬಾರಿಯ ಏಷ್ಯಾ ಚಾಂಪಿಯನ್ ಆಗಿರುವ ಭಾರತ ವನಿತೆಯರ ಕ್ರಿಕೆಟ್ ತಂಡವು, ಎಂಟನೇ ಏಷ್ಯಾಕಪ್ ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಹರ್ಮನ್‌ಪ್ರೀತ್ ಕೌರ್ ಪಡೆಯು, ಇಂದು ಶ್ರೀಲಂಕಾದ ದಂಬುಲ್ಲಾ ರಂಗಿರಿ ಸ್ಟೇಡಿಯಂನಲ್ಲಿ ನಡೆಯುವ ಏಷ್ಯಾಕಪ್ 2024ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಎದುರಿಸುತ್ತಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯಿಂದ ಪಂದ್ಯ ಶುರುವಾಗಲಿದೆ.
ಏಷ್ಯಾಕಪ್ ಇತಿಹಾಸದಲ್ಲಿ ಭಾರತವನ್ನು ಹೊರತುಪಡಿಸಿ ಕಪ್ ಗೆದ್ದಿರುವ ಮತ್ತೊಂದು ತಂಡವಿದ್ದರೆ ಅದು ಬಾಂಗ್ಲಾದೇಶ ಮಾತ್ರ. 2018ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿದ್ದ ಬಾಂಗ್ಲಾ ಚೊಚ್ಚಲ ಏಷ್ಯಾಕಪ್ ಚಾಂಪಿಯನ್ ಪಟ್ಟ ಮೂಡಿಗೆರಿಸಿಕೊಂಡಿತ್ತು. ಹೀಗಾಗಿ ಬಾಂಗ್ಲಾ ತಂಡವನ್ನು ಭಾರತ ಈ ಬಾರಿ ಲಘುವಾಗಿ ಪರಿಗಣಿಸುವಂತಿಲ್ಲ. ಇನ್ನು ಉಭಯ ತಂಡಗಳು ಈವರೆಗೆ ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಮೇಲುಗೈ ಸಾಧಿಸಿದೆ.
ಅಂತೆಯೇ ಇಂದು ಸಂಜೆ 7 ಗಂಟೆಗೆ ದಂಬುಲ್ಲಾದಲ್ಲಿ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಪಾಕಿಸ್ತಾನ ತಂಡ ಎದರಿಸಲಿದೆ. ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲದಿಂದ ಕೂಡಿರುವುದರಿಂದ ಯಾವ ತಂಡ ಸೆಮಿಫೈನಲ್ ಗೆದ್ದು ಫೈನಲ್ಗೆ ಎಂಟ್ರಿ ಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಲೈವ್ ಸ್ಟ್ರೀಮಿಂಗ್ ವಿವರ : ಏಷ್ಯಾಕಪ್ ಟಿ20 ಸೆಮಿಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇನ್ನು ಮೊಬೈಲ್ ನಲ್ಲಿ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಪಂದ್ಯದ ಲೈವ್ ಸ್ಟ್ರೀಮಿಂಗ್ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ : ಟಾಕ್ಸಿಕ್ ಸಿನಿಮಾಗೆ ಸಂಕಷ್ಟ – ರಾಕಿಂಗ್ ಸ್ಟಾರ್ ಯಶ್ ನಟನೆಯ ಚಿತ್ರದ ವಿರುದ್ಧ ದೂರು..!