ಉತ್ತರಾಖಂಡ : ಇಂದು ಬೆಳ್ಳಂಬೆಳಗ್ಗೆ ಡೆಹ್ರಾಡೂನ್ನಿಂದ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ವೊಂದು ಗೌರಿಕುಂಡದ ಬಳಿ ಪತನಗೊಂಡಿದ್ದು, ಈ ದುರ್ಘಟನೆಯಲ್ಲಿ ಪೈಲೆಟ್ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ.
ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹೆಲಿಕಾಪ್ಟರ್ ಗೌರಿಕುಂಡ್ ಮತ್ತು ತ್ರಿಜುಗಿನಾರಾಯಣದ ನಡುವೆ ಕೆಡಾರ್ಘಾತಿಯಲ್ಲಿ ಬಿದ್ದಿದೆ. ಹೆಲಿಕಾಪ್ಟರ್ ಬೆಂಕಿಗೆ ಆಹುತಿಯಾಗಿದೆ. ವ್ಯತಿರಿಕ್ತ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಹೆಲಿಕಾಪ್ಟರ್ ಪತನವನ್ನು ಹೆಲಿಕಾಪ್ಟರ್ ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ದೃಢಪಡಿಸಿದ್ದಾರೆ. ಘಟನೆ ವೇಳೆ ಹೆಲಿಕಾಪ್ಟರ್ ನಲ್ಲಿ ಪೈಲೆಟ್ ಸೇರಿ ಒಟ್ಟು 7 ಮಂದಿ ಇದ್ದರು ಎನ್ನಲಾಗಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. “ರುದ್ರಪ್ರಯಾಗ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ದುಃಖದ ಸುದ್ದಿ ಬಂದಿದೆ. SDRF, ಸ್ಥಳೀಯ ಆಡಳಿತ ಮತ್ತು ಇತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಗಾಗಿ ಬಾಬಾ ಕೇದಾರನನ್ನು ಪ್ರಾರ್ಥಿಸುತ್ತೇನೆ” ಎಂದು ಅವರು ‘X’ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ರೂ. ವಂಚನೆ – ಮಂತ್ರವಾದಿಗಾಗಿ ಪೊಲೀಸರ ಹುಡುಕಾಟ!
