ಬೆಂಗಳೂರು : ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕ, ಬೆಂಗಳೂರು ನಗರದ ಮೂಲ ಸೌಕರ್ಯವನ್ನು ಬಲಪಡಿಸಲು 1.15 ಲಕ್ಷ ಕೋಟಿ ಅನುದಾನ
ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಕಡಿಮೆ ಆದಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸಮಸ್ಯೆಯನ್ನು ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು, ಈ ಪೈಕಿ ಐದು ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಸಮಾನವಿದೆ. ಮಲೆನಾಡು ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತದಂತಹ ಸಮಸ್ಯೆಗಳು ತಲೆದೋರುತ್ತಿವೆ. ಅದ್ದರಿಂದ ವಿಶೇಷ ಅನುದಾನವನ್ನು ಒದಗಿಸಬೇಕೆಂದು ಒತ್ತಿ ಹೇಳಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ. ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ 8.7ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಿಂದ ಕೇಂದ್ರಕ್ಕೆ ₹4.5 ಲಕ್ಷ ಕೋಟಿ ತೆರಿಗೆ ಸಂದಾಯವಾಗುತ್ತಿದೆ. ರಾಜ್ಯವು ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದರೂ ಸಂಪನ್ಮೂಲ ಹಂಚಿಕೆಯಲ್ಲಿ ತೀವ್ರ ಅಸಮತೋಲನ ಉಂಟಾಗಿದೆ ಎಂದು ವಿವರಿಸಿದ್ದಾರೆ.
ಕರ್ನಾಟಕದಿಂದ ಕೇಂದ್ರಕ್ಕೆ ಸ್ವೀಕೃತವಾಗುವ ತೆರಿಗೆಯಲ್ಲಿ ಪ್ರತಿ ರೂಪಾಯಿಗೆ ಪ್ರತಿಯಾಗಿ 15 ಪೈಸೆ ಮಾತ್ರ ರಾಜ್ಯಕ್ಕೆ ವಾಪಸ್ ಬರುತ್ತಿದೆ. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು ಶೇ 4.713ರಷ್ಟಿದ್ದು, ಅದನ್ನು 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು ಶೇ 3.647ಕ್ಕೆ ಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆ ಮೊತ್ತದಲ್ಲಿ ನಮ್ಮ ಪಾಲು ಒಟ್ಟಾರೆ ಶೇ 23ರಷ್ಟು ಇಳಿಕೆಯಾಗಿದೆ.

ಐದು ವರ್ಷಗಳಲ್ಲಿ ಒಟ್ಟು ₹68.275 ಕೋಟಿ ಕಡಿಮೆ ಆಗಿದೆ. 16ನೇ ಆಯೋಗದಲ್ಲಿ ಈ ಅನ್ಯಾಯ ಮರುಕಳಿಸಬಾರದು ಎಂಬುದಾಗಿ ಹೇಳಿದ್ದೇವೆ 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಿತ್ತು.
ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದಲ್ಲದೇ ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆಗೆ ₹3,000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 23,000 ಕೋಟಿ ಶಿಫಾರಸು ಮಾಡಿತ್ತು. ಇವೆಲ್ಲ ಸೇರಿ ಒಟ್ಟು ₹11,495 ಕೋಟಿ ಒದಗಿಸಬೇಕೆಂದು ಶಿಫಾರಸು ಮಾಡಿತ್ತು’ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಭೆಯು ಒಂದೂ ಗಂಟೆಗೂ ಹೆಚ್ಚು ಕಾಲ ಸೌಹಾರ್ದಯುತವಾಗಿ ನಡೆದಿದ್ದು, ಆಯೋಗದ ಅಧ್ಯಕ್ಷರು ನಮ್ಮ ಸಲಹೆಗಳನ್ನು ಸ್ವೀಕರಿಸಿದ್ದಾರೆ. ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗರಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ಭಾಗಿಯಾಗಿದ್ದರು.
ಇದನ್ನೂ ಓದಿ : ದುರಂತದ ಬೆನ್ನಲ್ಲೇ ಏರ್ ಇಂಡಿಯಾದ ಎಲ್ಲಾ ಡ್ರೀಮ್‌ಲೈನರ್ ವಿಮಾನಗಳ ತಪಾಸಣೆಗೆ DGCA ಆದೇಶ!







