ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿಗೆ – ಕೋರ್ಟ್​​ಗೆ ಶರಣಾಗ್ತಿದ್ದಂತೆ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿರುವ ಸಿಬಿಐ!

ಧಾರವಾಡ : ಒಂಬತ್ತು ವರ್ಷಗಳ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನು ರದ್ದಾಗಿದ್ದು, ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅವರು ಶರಣಾಗಲಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಸಾಕ್ಷಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ಮಂಗಳವಾರ ವಿನಯ್‌ ಕುಲಕರ್ಣಿಗೂ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ವಿಚಾರಣೆ ವೇಳೆ, ವಿನಯ್‌ ಪರ ವಕೀಲರು ಗೈರು ಹಾಜರಿಗೆ ಕೆಲ ಕಾರಣ ನೀಡಿ, ಹಾಜರಾತಿಗೆ ವಿನಾಯಿತಿ ಕೋರಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ನ್ಯಾಯಾಲಯ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.

ಇದೇ ಪ್ರಕರಣದಲ್ಲಿ ಜೂ.6ರಂದು ಸುಪ್ರೀಂಕೋರ್ಟ್‌ ವಿನಯ್‌ ಕುಲಕರ್ಣಿಗೆ ಜಾಮೀನು ರದ್ದುಗೊಳಿಸಿದ್ದು, ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶುಕ್ರವಾರ ಶರಣಾಗುವುದಾಗಿ ತಿಳಿಸಿದ್ದರು. ತಮ್ಮ ಅನುಪಸ್ಥಿತಿಯಲ್ಲಿ ಕ್ಷೇತ್ರವನ್ನು ತಮ್ಮ ಪತ್ನಿ ಮತ್ತು ಮಗಳು ನೋಡಿಕೊಳ್ಳುತ್ತಾರೆ. ಅವರಿಗೆ ಸಹಕಾರ ನೀಡಬೇಕು ಎಂದು ತಮ್ಮ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದರು. ಈ ಮಧ್ಯೆ, ಇಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಕೋರ್ಟ್​​ಗೆ ಶರಣಾಗ್ತಿದ್ದಂತೆ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿದ್ದಾರೆ.

ಇದನ್ನೂ ಓದಿ : ಹೊಸಕೋಟೆ ಗೊಟ್ಟಿಪುರ ಗೇಟ್ ಬಳಿ ಬಸ್-ಲಾರಿ ಮಧ್ಯೆ ಭೀಕರ ಅಪಘಾತ – ನಾಲ್ವರು ದುರ್ಮರಣ!

Btv Kannada
Author: Btv Kannada

Read More