ಅಹಮದಾಬಾದ್​ ವಿಮಾನ ದುರಂತ – ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಟಾಟಾ ಗ್ರೂಪ್!

ನವದೆಹಲಿ : ಅಹಮದಾಬಾದ್​ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಅಹಮದಾಬಾದ್​ನಿಂದ ಲಂಡನ್​ಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಗುರುವಾರ (ಜೂ.12) ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಓರ್ವ ಪವಾಡ ಸದೃಶ್ಯವಾಗಿ ಬದುಕುಳಿದ್ದು, ಮತ್ತೆಲ್ಲರೂ ಮೃತಪಟ್ಟಿದ್ದಾರೆ.

ಈ ದುರಂತಕ್ಕೆ ಟಾಟಾ ಗ್ರೂಪ್​​ನ ಅಧ್ಯಕ್ಷ ಎನ್ ಚಂದ್ರಶೇಖರನ್​​​ ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದಾರೆ. “ಈ ದುರಂತ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಮತ್ತು ಗಾಯಗೊಂಡವರೊಂದಿಗೆ ಇವೆ” ಎಂದು ಹೇಳಿದ್ದಾರೆ.

“ಈ ದುರಂತದಲ್ಲಿ ಮೃತರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಹಾಗೂ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳುತ್ತೇವೆ. ವಿಮಾನ ಪತನಗೊಂಡ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನ ಪುನರ್​ ನಿರ್ಮಾಣಕ್ಕೆ ನೆರವು ನೀಡುತ್ತೇವೆ” ಎಂದು ಟ್ವೀಟ್​ ಮಾಡಿದ್ದಾರೆ.

ದುರಂತ ಸಂಭವಿಸಿದ್ದೇಗೆ? ಲಂಡನ್​​ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ AI171, ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೇಲವೇ ನಿಮಿಷಗಳಲ್ಲಿ ಪತನವಾಯಿತು. ವಿಮಾನದಲ್ಲಿ 230 ಮಂದಿ ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಇದ್ದರು.

ಇದನ್ನೂ ಓದಿ : ಕಾಂಗ್ರೆಸ್‌ ನಾಯಕ ಹೆಚ್‌.ಎಂ ರೇವಣ್ಣ ಪತ್ನಿ ನಿಧನ!

Btv Kannada
Author: Btv Kannada

Read More