ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ – ಮಾರಕಾಸ್ತ್ರಗಳಿಂದ ಕೊಚ್ಚಿ ಕುಖ್ಯಾತ ರೌಡಿ ಬಾಗಪ್ಪ ಹರಿಜನ್ ಹತ್ಯೆ!

ವಿಜಯಪುರ : ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ ಹರಿದಿದೆ. ನಟೋರಿಯಸ್ ಹಂತಕ ಚಂದಪ್ಪ ಹರಿಜನ್ ಖಾಸಾ ಖಾಸಾ ಶಿಷ್ಯ, ಕುಖ್ಯಾತ ರೌಡಿ ಬಾಗಪ್ಪ ಹರಿಜನ್​ನನ್ನ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದಾರೆ.

ನಿನ್ನೆ (ಫೆ.11) ರಾತ್ರಿ 8.50ರ ಸುಮಾರಿಗೆ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ಸಿಕ್ಕ ಸಿಕ್ಕಲಿ ಹೊಡೆದು ಬಾಗಪ್ಪನನ್ನ ಕೊಲೆ ಮಾಡಲಾಗಿದೆ. ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಬಾಗಪ್ಪ ರಾತ್ರಿ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಹತ್ಯೆ ಮಾಡಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

ಇನ್ನು ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ಹಂತಕನೋರ್ವ ಐದು ಸುತ್ತು ಗುಂಡು ಹಾರಿಸಿದ್ದರಿಂದ ಬಾಗಪ್ಪ ಹರಿಜನನ ಎದೆ ಭಾಗಕ್ಕೆ ಹೊಕ್ಕಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಬದುಕುಳಿದಿದ್ದ. ಆದರೆ ಇದೀಗ 10-15 ಜನರಿದ್ದ ಹಂತಕರ ತಂಡ ಯೋಜಿತ ರೀತಿಯಲ್ಲಿ ದಾಳಿ ನಡೆಸಿದ್ದು, ಬಾಗಪ್ಪ ಹರಿಜನ್ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.

ಯಾರು ಈ ಬಾಗಪ್ಪ ಹರಿಜನ್? ಹತ್ಯೆಯಾದ ಬಾಗಪ್ಪ ಹರಿಜನ್ ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್‌ನ ಶಿಷ್ಯನಾಗಿದ್ದು, ಭೀಮಾತೀರದ ಅತ್ಯಂತ ಶಾರ್ಪ್ ಶೂಟರ್ ಹಂತಕನಾಗಿದ್ದ. 2000 ವರ್ಷದ ಮೇ ತಿಂಗಳಲ್ಲಿ ಚಂದಪ್ಪ ಹರಿಜನ್ ಹತ್ಯೆ ನಂತರ ಭೀಮಾತೀರದಲ್ಲಿ ಬಾಗಪ್ಪ ಹರಿಜನ್ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದ. ಚಂದಪ್ಪನ ಸಾವಿನ ಬಳಿಕ ಕುಟುಂಬದಲ್ಲಿ ಉಂಟಾಗಿದ್ದ ಆಸ್ತಿ ಗಲಾಟೆ ಪ್ರಕರಣದಲ್ಲಿ ಬಾಗಪ್ಪ ಚಂದಪ್ಪನ ಸಹೋದರ ಬಸಪ್ಪ ಹರಿಜನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಆಲಮೇಲ ಪೊಲೀಸ್‌ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಗಾಂಧಿಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಬ್ಯಾಡಗಿಹಾಳ ಗ್ರಾಮದ ಬಸ್‌ ಕಂಡಕ್ಟರ್‌ ಓರ್ವನ ಕೊಲೆ ಪ್ರಕರಣದಲ್ಲಿ ಬಾಗಪ್ಪ ಪ್ರಮುಖ ಪಾತ್ರಧಾರಿಯಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

Btv Kannada
Author: Btv Kannada

Read More