ಮಂಗಳೂರು : ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರು ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಪಣಂಬೂರಿನಲ್ಲಿರುವ ನವ ಮಂಗಳೂರು ಬಂದರಿನ ಕಚೇರಿಗೆ ನುಗ್ಗಿ (ಎನ್‌ಎಂಪಿಎ) ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪಣಂಬೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಾಮಗಾರಿಯೊಂದರ ಬಿಲ್ ಪಾಸ್ ಮಾಡುವ ವಿಚಾರದಲ್ಲಿ ಮೊಯಿದ್ದೀನ್ ಬಾವಾ ಅವರು ಜೂನ್ 9ರಂದು ರಾತ್ರಿ ಎಂಟು ಗಂಟೆಗೆ ಎನ್‌ಎಂಪಿಎ ಕಚೇರಿಗೆ ಅಧಿಕಾರಿಗಳೊಂದಿಗೆ ಮಾತನಾಡಲು ಬಂದಿದ್ದು, ಈ ವೇಳೆ ಡೆಪ್ಯುಟಿ ಚೇರ್ ಪರ್ಸನ್ ಕಚೇರಿಗೆ ನುಗ್ಗಿ ವಾಗ್ವಾದ ನಡೆಸಿದ್ದಾರೆ. ಅವರನ್ನು ಕಚೇರಿಯಿಂದ ಹೊರಗೆ ಹೋಗಲು ಬಿಡದೇ, 15 ನಿಮಿಷ ಕಾಲ ತಡೆದು ನಿಲ್ಲಿಸಿ ಕಿರುಚಾಡಿದ್ದಾರೆ. ನಂತರ ಅಧಿಕಾರಿ ಹೊರಗೆ ಬಂದಾಗಲೂ ಹಿಂಬಾಲಿಸುತ್ತ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು, ಅಧಿಕಾರಿ ಬೇರೆ ಕರ್ತವ್ಯಕ್ಕಾಗಿ ಕಾರಿನಲ್ಲಿ ಹೊರಗಡೆ ತೆರಳಲು ಮುಂದಾಗಿದ್ದ ವೇಳೆಯೂ ಕಾರನ್ನು ತಡೆದು ನಿಲ್ಲಿಸಿ, ಬೈದಾಡಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಎನ್‌ಎಂಪಿಎ ಸೆಕ್ರೆಟರಿಯವರು ಜೂನ್ 10ರಂದು ಸಂಜೆ ಪಣಂಬೂರು ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೊಯಿದ್ದೀನ್ ಬಾವಾ ಹಾಗೂ ಇಬ್ಬರು ಸಹಚರರ ವಿರುದ್ಧ ಅ.ಕ್ರ 60/2025 ಕಲಂ 224, 221, 132, 126, 127, 226 BNS ಪ್ರಕಾರ ಪ್ರಕರಣ ದಾಖಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ – ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!
