ಕನ್ನಡ ಚಿತ್ರರಂಗಕ್ಕೆ ಡಿ.ಕ್ರಿಯೇಷನ್ಸ್ ಮೂಲಕ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್. ನಿರ್ಮಾಣದ, ನಿರ್ದೇಶಕ ಮಂಸೋರೆ ನಿರ್ದೇಶಿಸಿರುವ “ದೂರ ತೀರ ಯಾನ” ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ವಿಜಯ್ ಕೃಷ್ಣ-ಪ್ರಿಯಾಂಕ ಕುಮಾರ್ ಜೋಡಿಯಾಗಿ ನಟಿಸಿದ್ದಾರೆ. ಕಿರಣ್ ಕಾವೇರಪ್ಪ ಬರೆದು ಬಕ್ಕೇಶ್ ಹಾಗೂ ಕಾರ್ತಿಕ್ ಸಂಗೀತ ನೀಡಿರುವ ಹಾಗೂ ಬಕ್ಕೇಶ್ – ಇಶಾ ಸುಚಿ ಅವರು ಹಾಡಿರುವ ಈ ಶೀರ್ಷಿಕೆ ಗೀತೆಯನ್ನು ನಿರ್ಮಾಪಕ ದೇವರಾಜ್ ಅವರ ಪುತ್ರ ಜಯರಾಮ್ ಬಿಡುಗಡೆ ಮಾಡಿದರು. ಹೆಸರಾಂತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಾಗೂ ಖ್ಯಾತ ನಟ ನವೀನ್ ಶಂಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಂ.ಆರ್.ಟಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಪ್ರೇಕ್ಷಕರು ಫಿದಾ ಆಗಿದ್ದು, ಇಲ್ಲಿ ಮಾತ್ರವಲ್ಲದೆ ದೂರದೂರುಗಳಿಂದಲ್ಲೂ(ವಿದೇಶ) ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಅಧಿಕ ಸಂಖ್ಯೆಯಲ್ಲೂ ವೀಕ್ಷಣೆಯಾಗುತ್ತಿದೆ.
“ದೂರ ತೀರ ಯಾನ” ದಲ್ಲಿ ಆರು ಹಾಡುಗಳು ಹಾಗೂ ಎರಡು ಮ್ಯೂಸಿಕಲ್ ಬಿಟ್ಸ್ ಇದೆ. ಇಂದು ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಈ ಹಾಡಿಗೆ ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದು, ನಾನು ಹಾಗೂ ಕಾರ್ತಿಕ್ ಸಂಗೀತ ನೀಡಿದ್ದೇವೆ. ನಾನು ಹಾಗೂ ಇಶಾ ಸುಚಿ ಹಾಡಿದ್ದೇವೆ. ಹೆಸರಾಂತ ಮ್ಯೂಸಿಷಿಯನ್ ನನ್ನೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂಗೀತ ನಿರ್ದೇಶಕ ಹಾಗೂ ಗಾಯಕ ರೋಣದ ಬಕ್ಕೇಶ್ ಹೇಳಿದರು.
ನಿರ್ದೇಶಕ ಮಂಸೋರೆ ಅವರು, ನಮ್ಮ ಸಿನಿಮಾದ ಹಾಡುಗಳಲ್ಲಿ ಒಂದೇ ಒಂದು ಇಂಗ್ಲೀಷ್ ಪದ ಕೂಡ ಬಳಸದೇ ನಮ್ಮ ಸಂಗೀತ ನಿರ್ದೇಶಕರು ಹಾಗೂ ಗೀತ ಸಾಹಿತಿಗಳ ನೆರವಿನಿಂದ ಹಾಡುಗಳನ್ನು ಸಂಯೋಜಿಸಿದ್ದೇವೆ. ಇವೆಲ್ಲಾ ನಮ್ಮ ಕನ್ನಡ ಭಾಷೆಯ ಹಿರಿಮೆ. ಬಕೇಶ್ ಸಂಗೀತ ನೀಡಿ ಹಾಡಿರುವ ಈ ಶೀರ್ಷಿಕೆ ಗೀತೆ ನನ್ನ ಮೆಚ್ಚಿನ ಗೀತೆಯೂ ಹೌದು. ಲಾಂಗ್ ಡ್ರೈವ್ ಮಾಡುವ ಪಯಣಿಗರಿಗೆ ಸಿಕ್ಕ ಸುಮಧುರ ಗೀತೆ ಕೂಡ. ನಮ್ಮ ಚಿತ್ರದಲ್ಲಿ ಆರು ಹಾಡುಗಳು ಹಾಗೂ ಎರಡು ಬಿಟ್ಸ್ ಇದ್ದು, ಬಕೇಶ್ ಸುಮಾರು ಒಂದು ವರ್ಷದ ಕಾಲದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಆರ್.ಟಿ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ದೇವರಾಜ್ ಅವರ ಸಹಕಾರ ಅಪಾರವಾಗಿದೆ. “ದೂರ ತೀರ ಯಾನ” ಬೆಂಗಳೂರಿನಿಂದ ಗೋವಾದವರೆಗೂ ನಡೆಯುವ ಪಯಣದ ಕಥೆ. ಇದು ಪ್ರೇಮ ಕಥೆಯಲ್ಲ. ಪ್ರೇಮದ ಕಥೆ. ಜುಲೈ 11 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನಿರ್ಮಾಣವಾಗಿದೆ. ಜುಲೈ 11ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ನಿರ್ಮಾಪಕ ದೇವರಾಜ್ ಹೇಳಿದರು.
ಇಂದು ಬಿಡುಗಡೆಯಾಗಿರುವ ಟೈಟಲ್ ಸಾಂಗ್ನಲ್ಲಿ ಸಖತ್ ಎನರ್ಜಿ ಇದೆ. ಅದೇ ಎನರ್ಜಿ ಯಲ್ಲಿ ನಮ್ಮ ಚಿತ್ರತಂಡ ಕೆಲಸ ಮಾಡಿದೆ. ಇಂದು ಹಾಡು ಬಿಡುಗಡೆ ಸಮಾರಂಭ. ಹಾಗಾಗಿ ಅದರ ಬಗ್ಗೆ ಹೇಳಿದ್ದೀನಿ. ನನ್ನ ಪಾತ್ರದ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ನಾಯಕ ವಿಜಯ್ ಕೃಷ್ಣ ಹೇಳಿದರು. ಇದು ನನ್ನ ಇಷ್ಟದ ಗೀತೆ ಕೂಡ ಎಂದು ನಾಯಕಿ ಪ್ರಿಯಾಂಕ ಕುಮಾರ್ ತಿಳಿಸಿದರು.
ಎಂ ಆರ್ ಟಿ ಮ್ಯೂಸಿಕ್ನ ಆನಂದ್, ಸಂಗೀತ ನಿರ್ದೇಶಕ ಕಾರ್ತಿಕ್, ಹಾಡು ಬರೆದಿರುವ ಕಿರಣ್ ಕಾವೇರಪ್ಪ, ಗಾಯಕಿ ಇಶಾ ಸುಚಿ ಮುಂತಾದವರು “ದೂರ ತೀರ ಯಾನ”ದ ಶೀರ್ಷಿಕೆ ಗೀತೆ ಬಗ್ಗೆ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ : ಕರಾವಳಿ ಭಾಗದ ಪ್ರೇಮಕಥೆ ‘ಮಾರ್ನಮಿ’ ಚಿತ್ರದ ಟೀಸರ್ ಔಟ್ – ರಗಡ್ ಲುಕ್‌ನಲ್ಲಿ ರಿತ್ವಿಕ್ ಮಠದ್!
