ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನ ಅಭಿಮಾನಿಗಳು ಮೃತಪಟ್ಟಿದ್ದರು. ಸದ್ಯ ಈ ಕೇಸ್ ಕೋರ್ಟ್ ಕಟಕಟೆಯಲ್ಲಿದ್ದು, ಈ ಮಧ್ಯೆ ಆರ್‌ಸಿಬಿ ಮಾರಾಟದ ಸುದ್ದಿ ತೀವ್ರ ಸಂಚಲನ ಸೃಷ್ಟಿಸಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್ ಅವರು RCB ಅನ್ನು ಕೊಂಡುಕೊಳ್ಳಲಿದ್ದಾರೆ ಎಂಬ ಬಿಸಿ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು.
ಆದರೆ RCB ಫ್ರಾಂಚೈಸಿ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿರಲಿಲ್ಲ. ಇದಕ್ಕೆ ಇದೀಗ ಸ್ವತಃ ಡಿಕೆಶಿ ಅವರೇ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನು ಕುಡಿಯಲ್ಲ. ನಾನು ಹುಚ್ಚನೂ ಅಲ್ಲ. ನನಗೇಕೆ RCB ಟೀಮ್ ಬೇಕು? RCB ಟೀಮ್ ಅನ್ನು ನಾನು ಖರೀದಿಸುತ್ತಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ನಾನು KSCA (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಸದಸ್ಯ ಮಾತ್ರ. ಈ ಹಿಂದೆ ನನಗೆ ಕೆಎಸ್‌ಸಿಎ ಮ್ಯಾನೇಜ್‌ಮೆಂಟ್‌ಗೆ ಸೇರುವ ಆಫರ್ ಬಂದಿತ್ತು. ಆದರೆ ನನಗೆ ಸಮಯವಿಲ್ಲ. ನನ್ನ ಎಜುಕೇಷನ್ ಇನ್ಸ್‌ಟಿಟ್ಯೂಷನ್ ಅನ್ನು ನೋಡಿಕೊಳ್ಳಲು ನಮ್ಮ ಕುಟುಂಬದ ಬೇರೆ ಸದಸ್ಯರಿಗೆ ಬಿಟ್ಟಿದ್ದೇನೆ. ನನಗೆ ಸಮಯವಿಲ್ಲದ ಕಾರಣ ತಾನು ಆರ್‌ಸಿಬಿ ಟೀಮ್ ಖರೀದಿಸುತ್ತಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಹೈಕೋರ್ಟ್ನಲ್ಲಿ ನಿಖಿಲ್ ಸೋಸಲೆ ಅರ್ಜಿ ವಿಚಾರಣೆ ಮುಕ್ತಾಯ – ನಾಳೆ ಮಧ್ಯಂತರ ತೀರ್ಪು ಪ್ರಕಟ!
