ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಕನ್ನಡದ ನಟಿ ರನ್ಯಾ ರಾವ್ ಜೈಲು ಪಾಲಾಗಿ ಹಲವು ತಿಂಗಳು ಕಳೆದಿವೆ. ಸದ್ಯ ಅವರ ವಿರುದ್ಧ ನಾನಾ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಕಾರಣಕ್ಕೆ ಅವರಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಿರುವಾಗಲೇ ರನ್ಯಾ ರಾವ್ ಪ್ರಕರಣಕ್ಕೆ ಆದಾಯ ತೆರಿಗೆ (IT) ಇಲಾಖೆ ಎಂಟ್ರಿ ಕೊಟ್ಟಿದೆ. ಕೆಲವು ದಿನಗಳ ಕಾಲ ಅವರನ್ನು ವಿಚಾರಣೆ ಮಾಡಲು ಐಟಿ ಇಲಾಖೆ ಮುಂದಾಗಿದ್ದು, ಈ ಮೂಲಕ ನಟಿಗೆ ಮತ್ತಷ್ಟು ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಈಗ ಐಟಿ ಇಲಾಖೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ರನ್ಯಾ ವಿಚಾರಣೆಗೆ ಅನುಮತಿ ಪಡೆದಿದೆ. ಅದರಂತೆ ಇಂದಿನಿಂದ (ಜೂನ್ 11) ಜೂನ್ 13ರವರೆಗೆ ನಟಿಯ ವಿಚಾರಣೆ ನಡೆಯಲಿದೆ. ರನ್ಯಾ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅಲ್ಲಿಯೇ ಅವರು ವಿಚಾರಣೆಗೆ ಒಳಗಾಗಲಿದ್ದಾರೆ. ಇಷ್ಟು ದಿನ ಜೈಲಿನಲ್ಲಿ ಹಾಯಾಗಿದ್ದ ಅವರಿಗೆ ಈಗ ಮತ್ತೆ ವಿಚಾರಣೆಯ ಭೂತ ಕಾಡಿದೆ. ಐಟಿ ಮಹಿಳಾ ಇನ್ಸ್ಪೆಕ್ಟರ್ ಶ್ವೇತ, ಇನ್ಸ್ಪೆಕ್ಟರ್ ರವಿಪಾಲ್ ನೇತೃತ್ವದಲ್ಲಿ ಇಂದಿನಿಂದ ನಟಿ ರನ್ಯಾ ರಾವ್ ವಿಚಾರಣೆ ನಡೆಯಲಿದೆ. ಈ ವಿಚಾರಣೆ ವೇಳೆ ಮತ್ತಷ್ಟು ದೊಡ್ಡ ವಿಚಾರಗಳು ಬಹಿರಂಗ ಆಗುವ ಸಾಧ್ಯತೆ ಇದೆ. ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ವಿಚಾರಣೆ ನಡೆಸುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಕರಣದ ಹಿನ್ನಲೆ : ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರು 14 ಕೆಜಿ ಚಿನ್ನದ ಜೊತೆ ಸಿಕ್ಕಿ ಬಿದ್ದಿದ್ದರು. ತಕ್ಷಣ ಅವರನ್ನು ಬಂಧಿಸಲಾಯಿತು. ಅಕ್ರಮ ಚಿನ್ನ ಕಳ್ಳ ಸಾಗಣೆಗೆ ಪೊಲೀಸ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡಿದ್ದು, ತನಿಖೆ ವೇಳೆ ತಿಳಿದು ಬಂದಿತ್ತು. ಅಲ್ಲದೆ, ಈ ಮೊದಲು ಹಲವು ಬಾರಿ ಚಿನ್ನ ಕಳ್ಳ ಸಾಗಣೆ ಮಾಡಿ, ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದು ಕೂಡ ಬಹಿರಂಗ ಆಗಿದೆ.
ಈ ಮೊದಲು ನಟಿ ರಮ್ಯಾಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ, ಆದರೆ ರನ್ಯಾ ರಾವ್ ಜೈಲಿನಿಂದ ಬಿಡುಗಡೆ ಆಗಿಲ್ಲ. ಇದಕ್ಕೆ ಕಾರಣ ಅವರ ಮೇಲೆ ದಾಖಲಾದ ಕೇಸ್. ರನ್ಯಾ ವಿರುದ್ಧ ಕಠಿಣವಾದ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ (ಕಾಫೆಪೊಸಾ/COFEPOSA) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಕಠಿಣವಾದ ಕಾಯ್ದೆಯಾಗಿದೆ. ಇದರ ಅಡಿಯಲ್ಲಿ ಕೇಸ್ ದಾಖಲಾದರೆ ಜಾಮೀನು ಸಿಗೋದಿಲ್ಲ. ಒಂದೊಮ್ಮೆ ಆರೋಪಿಗಳಿಗೆ ಬೇರೆ ಪ್ರಕರಣಗಳಲ್ಲಿ ಜಾಮೀನು ದೊರೆತರೂ ಸಹ ಅವರ ಬಿಡುಗಡೆ ಸಾಧ್ಯವಿಲ್ಲ. ಈ ಕಾರಣದಿಂದಲೇ ಅವರಿನ್ನೂ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಇದನ್ನೂ ಓದಿ : ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ – ಷರತ್ತುಬದ್ಧ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್!
