ಬೆಂಗಳೂರು : ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್‌ನಲ್ಲಿ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ರಕ್ಷಿಸುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ಇನ್ಮುಂದೆ ಪಾರ್ಕ್‌ನಲ್ಲಿ ರೀಲ್ಸ್, ಫೋಟೋಶೂಟ್, ಫಿಲ್ಮ್ ಶೂಟಿಂಗ್, ಊಟ-ತಿಂಡಿ ಸೇವನೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು. ಆದರೆ ಫೋಟೋಶೂಟ್, ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ಸ್, ವೀಡಿಯೋ, ಕಿರುಚಿತ್ರ, ಚಲನಚಿತ್ರ ಚಿತ್ರೀಕರಣವನ್ನು ಮಾಡುವಂತಿಲ್ಲ. ಹಾಗೂ ವಾಯು ವಿಹಾರದ ಸಮಯವನ್ನು ಬೆಳಗ್ಗೆ 5.30ರಿಂದ 9ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6.30 ಗಂಟೆಯವರೆಗೆ ನಿಗದಿಪಡಿಸಲಾಗಿದೆ.
ತೋಟಗಾರಿಕೆ ಇಲಾಖೆಯು ಪಾರ್ಕ್‌ನಲ್ಲಿರುವ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ರಕ್ಷಿಸುವ ಉದ್ದೇಶದಿಂದ ಮತ್ತು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಯನ್ನು ಮಾಡಿದೆ.
ಈ ಹಿಂದೆ ರಜಾದಿನಗಳಂದು ವಾಹನಗಳ ಸಂಚಾರ ನಿರ್ಬಂಧ ಸೇರಿದಂತೆ ಹಲವು ನಿರ್ಬಂಧವನ್ನು ವಿಧಿಸಿದ್ದ ಇಲಾಖೆ, ಇದೀಗ ಸಾರ್ವಜನಿಕ ಚಟುವಟಿಕೆಗಳಿಗೂ ಬ್ರೇಕ್ ಹಾಕಲು ಮುಂದಾಗಿದೆ. ಇದರ ಭಾಗವಾಗಿ ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ಜಾಗೃತಿ ಜಾಥಾ, ವಾಕನಾಥ್, ಮ್ಯಾರಥಾನ್‌ನಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರು ಕಾರ್ಯಕ್ರಮ ನಡೆಸಿದರೆ 500 ದಂಡ ಹಾಗೂ ಕಠಿಣ ಕಾನೂನು ಕ್ರಮ ವಹಿಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ತೋಟಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿ ಸ್ಪಷ್ಟ ಆದೇಶ ಹೊರಡಿಸಿದ್ದು, ಸಂರಕ್ಷಣಾ ಹಿತದೃಷ್ಟಿಯಿಂದ ರಚಿಸಲಾದ ನಿಯಮಗಳನ್ನು ಉಲ್ಲಂಘಿಸಿದವರಿಗೆ ಗರಿಷ್ಠ 500ರೂ.ಗಳವರೆಗೆ ದಂಡ ಹಾಗೂ ಪದೇಪದೆ ಉಲ್ಲಂಘಿಸಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿಲಾಗಿದೆ.
ಯಾವೆಲ್ಲ ಚಟುವಟಿಕೆಗೆ ನಿರ್ಬಂಧ :
ಕಿರು ಚಿತ್ರ, ರೀಲ್ಸ್, ವಿಡಿಯೋ, ಚಲನಚಿತ್ರ ಚಿತ್ರೀಕರಣ ನಿಷೇಧಿಸಲಾಗಿದೆ.
ಪ್ರೀ ವೆಡ್ಡಿಂಗ್ ಶೂಟ್, ಬೇಬಿ ಶೈಟ್, ಮಾಡೆಲಿಂಗ್ ನಿರ್ಬಂಧ
ಉದ್ಯಾನವನದ ಆವರಣದಲ್ಲಿ ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಿದೆ.
ಪ್ಲಾಸ್ಟಿಕ್ ವಸ್ತುಗಳು, ಬಾಟಲಿ, ಪ್ಲಾಸ್ಟಿಕ್ ಚೀಲ, ಪೂಜಾ ಸಾಮಗ್ರಿ ಹಾಗೂ ಇತರೆ ಯಾವುದೇ ತ್ಯಾಜ್ಯಗಳಿಗೆ ಅವಕಾಶವಿಲ್ಲ.
ಯಾವೆಲ್ಲ ಚಟುವಟಿಕೆಗೆ ಅನುಮತಿ :
ವಾಕಾಥಾನ್, ಮ್ಯಾರಥಾನ್ ಹಾಗೂ ಜಾಗೃತಿ ಕಾರ್ಯಕ್ರಮ
ಬೆಳಗ್ಗೆ 5.30ರಿಂದ 9ಗಂಟೆಯವರೆಗೆ ಹಾಗೂ 4.30ರಿಂದ 6.30ರವರೆಗೆ ವಾಯು ವಿಹಾರಕ್ಕೆ ಅವಕಾಶ
ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ
ಸಸ್ಯ, ವನ್ಯಜೀವಿ, ಪ್ರಾಕೃತಿಕ ಹವ್ಯಾಸಿ ಛಾಯಾಗ್ರಹಣಕ್ಕೆ ಅನುಮತಿ
20 ಜನ ಮೀರದಂತೆ ಯೋಗ, ಧ್ಯಾನದ ರೀತಿಯ ಕಾರ್ಯಕ್ರಮಕ್ಕೆ ಒಪ್ಪಿಗೆ
ಇದನ್ನೂ ಓದಿ : ಅತ್ಯಾಚಾರ ಮಾಡಿಸಿದ್ದ ಪ್ರಕರಣ – ಬಿಜೆಪಿ ಶಾಸಕ ಮುನಿರತ್ನ ಬಂಧಿಸದಂತೆ ಹೈಕೋರ್ಟ್ ಆದೇಶ!
