ಬೆಂಗಳೂರು : ಮಹಿಳೆಯೊಬ್ಬರ ಮೇಲೆ ತನ್ನ ಸಹಚರರಿಂದ ಅತ್ಯಾಚಾರ ಮಾಡಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರು ತನಿಖೆಗೆ ಸಹಕರಿಸಬೇಕು ಮತ್ತು ಪೊಲೀಸರು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದಲ್ಲಿ ಆರೋಪಿಗಳಾಗಿರುವ ವಸಂತ್ ಕುಮಾರ್, ಚನ್ನಕೇಶವ ಮತ್ತು ಕಮಲ್ ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಲಾಗಿದೆ. ಕಾಲಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಲಾಗದು. ಹೀಗಾಗಿ, ಮುನಿರತ್ನ ಅವರಿಗೂ ಬೇರೆ ಆರೋಪಿಗಳಿಗೆ ನೀಡಲಾಗಿರುವ ರಕ್ಷಣೆಯನ್ನು ವಿಸ್ತರಿಸಲಾಗುವುದು. ಜೂನ್ 17ರಂದು ಪ್ರಕರಣವನ್ನು ಅಂತಿಮವಾಗಿ ನಿರ್ಧರಿಸಲಾಗುವುದು ಎಂದು ಹೇಳಿ, ನ್ಯಾಯಾಲಯ ವಿಚಾರಣೆ ಮುಂದೂಡಿದೆ.
ಸಂತ್ರಸ್ತೆ ಪರ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು “ವಿಚಾರಣಾಧೀನ ನ್ಯಾಯಾಲಯವು ಮುನಿರತ್ನ ಮತ್ತು ಇತರ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ, ಕಸ್ಟಡಿಗೆ ತನಿಖೆ ನಡೆಸಬೇಕಾದ ಅಗತ್ಯವಿದೆ. ಮುನಿರತ್ನ ವಿರುದ್ಧ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಹೀಗಾಗಿ, ರಕ್ಷಣೆ ನೀಡಬಾರದು” ಎಂದರು
ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ ಎಸ್ ಪ್ರದೀಪ್ ಅವರು “ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ, ಬಂಧಿಸುವುದಿಲ್ಲ ಎಂಬ ವಾಗ್ದಾನವನ್ನು ಹಿಂಪಡೆಯಲಾಗುವುದು” ಎಂದರು.
ಮುನಿರತ್ನ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು “ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಲಾಗುವುದು. ಹೀಗಾಗಿ, ಬಂಧನಕ್ಕೆ ಅವಕಾಶ ನೀಡಬಾರದು. ಇದೆಲ್ಲವೂ ರಾಜಕೀಯ ಪ್ರೇರಿತ ಪ್ರಕರಣಗಳಾಗಿವೆ” ಎಂದು ವಾದ ಮಂಡಿಸಿದರು.
ಇದನ್ನೂ ಓದಿ : ಕಾಲ್ತುಳಿತದ ಎಫೆಕ್ಟ್ – KSCAಗೆ ಶಾಕ್ ಕೊಟ್ಟ ಬಿಸಿಸಿಐ.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!
