ಬೆಂಗಳೂರು : ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಸದ್ಯ ಈ ಕಾಲ್ತುಳಿತ ದುರಂತ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇದರ ಬೆನ್ನಲ್ಲೇ ಕ್ರೀಡಾಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬಿಸಿಸಿಐ ಬೇರೆಡೆಗೆ ಶಿಫ್ಟ್ ಮಾಡಿದೆ.
ಹೌದು..ಕಾಲ್ತುಳಿತದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಡಳಿತಾತ್ಮಕ ಸ್ಥಿರತೆಯ ಬಗ್ಗೆ ಬಿಸಿಸಿಐ ಕಳವಳ ಹೊಂದಿದೆ. ಇದೇ ಕಾರಣದಿಂದಾಗಿ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ ‘ಎ’ ಮತ್ತು ಸೌತ್ ಆಫ್ರಿಕಾ ‘ಎ’ ನಡುವಿನ ಸರಣಿಯನ್ನು ಸ್ಥಳಾಂತರಿಸಲಾಗಿದೆ.
ಯಾವುದೇ ನಿರ್ದಿಷ್ಟ ಕಾರಣ ನೀಡದೇ ಬಿಸಿಸಿಐ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರಕಟಣೆಯಲ್ಲಿ ಬೆಂಗಳೂರಿನ ಪಂದ್ಯಗಳನ್ನು ರಾಜ್‌ಕೋಟ್‌ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. ಯಾವುದೇ ಕಾರಣಗಳನ್ನು ಪ್ರಸ್ತಾಪಿಸದೇ ಇದ್ದರೂ, ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಅದರಂತೆ ನವೆಂಬರ್ 13ರಿಂದ 19ರವರೆಗೆ ಭಾರತ ‘ಎ’ ಮತ್ತು ಸೌತ್ ಆಫ್ರಿಕಾ ‘ಎ’ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಬೆಂಗಳೂರಿನ ಬದಲು ರಾಜ್‌ಕೋಟ್‌ನಲ್ಲಿ ಆಯೋಜಿಸಲಾಗುತ್ತಿದೆ.
ಹಾಗೆಯೇ ಬೆಂಗಳೂರಿನಲ್ಲಿ ನಡೆಯಬೇಕಿರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಕೂಡ ಸಹ ಬೇರೆಡೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ವುಮೆನ್ಸ್ ಒಡಿಐ ವರ್ಲ್ಡ್ಕಪ್ನ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.
ಇದೀಗ ಕಾಲ್ತುಳಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಮಹಿಳಾ ಏಕದಿನ ವಿಶ್ವಕಪ್ನ ಉದ್ಘಾಟನಾ ಪಂದ್ಯವನ್ನು ಬೇರೆಡೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ದುರ್ಘಟನೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಅದರ ಮೊದಲ ಹೆಜ್ಜೆಯಾಗಿ ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಪಂದ್ಯಗಳನ್ನು ಸ್ಥಳಾಂತರಿಸಲು ಮುಂದಾಗಿದೆ. ಈ ಮೂಲಕ ದಾರುಣ ಘಟನೆಯ ಕಹಿ ನೆನಪು ಮಾಸುವ ತನಕ ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸದಿರಲು BCCI ನಿರ್ಧರಿಸಿದೆ.
ಇದನ್ನೂ ಓದಿ : ಆಟವಾಡ್ತಿದ್ದಾಗ ಕರೆಂಟ್ ಶಾಕ್ ಹೊಡೆದು 11 ವರ್ಷದ ಬಾಲಕಿ ಸಾವು!
