ಬೆಂಗಳೂರು : ಕಾಲ್ತುಳಿತ ಪ್ರಕರಣ ಕಾಂಗ್ರೆಸ್ ಸರ್ಕಾರಕ್ಕೆ ಸದ್ಯ ದೊಡ್ಡ ತಲೆಬಿಸಿ ಆಗಿದೆ. 11 ಮಂದಿ ಸಾವಿನ ಕಪ್ಪು ಚುಕ್ಕೆ ಸರ್ಕಾರಕ್ಕೆ ಅಂಟಿದೆ. ಘಟನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕಾರಣ ಎಂದು ವಿಪಕ್ಷಗಳು ಬೊಟ್ಟು ಮಾಡಿ ತೋರಿಸುತ್ತಿವೆ. ಇತ್ತ ಕಾಲ್ತುಳಿತ ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಬಹಳ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ರಾಹುಲ್ ಗಾಂಧಿ ಅವರಿಂದ ಬುಲಾವ್ ಬಂದಿದ್ದು, ವರದಿ ನೀಡಲೆಂದೇ ಸಿದ್ದರಾಮಯ್ಯ, ಡಿಕೆಶಿ ಇಂದು ದೆಹಲಿಗೆ ತೆರಳಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಯನ್ನ ಭೇಟಿಯಾಗಿ ಮಹತ್ವದ ಚರ್ಚೆಗಳನ್ನು ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಪ್ರಮುಖವಾಗಿ ಕಾಲ್ತುಳಿತ ದುರಂತದ ಲೋಪದೋಷದ ಬಗ್ಗೆ ಚರ್ಚೆಯಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ಗೆ ಮುಜುಗರವಾಗಿರುವ ಕಾಲ್ತುಳಿತ ದುರಂತದ ಬಗ್ಗೆ ಖುದ್ದಾಗಿ ರಾಹುಲ್ ಗಾಂಧಿ ವರದಿ ಪಡೆದುಕೊಳ್ಳಲಿದ್ದಾರೆ. ಹಾಗೆಯೇ ಹೆಚ್ಚುವರಿ ಸಮಯ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಂಪುಟ ವಿಸ್ತರಣೆ, ನಾಲ್ವರು ವಿಧಾನ ಪರಿಷತ್ ಸದಸ್ಯರ ನೇಮಕಾತಿ ಕುರಿತಂತೆಯೂ ಮಹತ್ವದ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸಚಿವ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ? ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆಯಿದೆ. ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿಯವರು ದೆಹಲಿಗೆ ತೆರಳಿದ್ದು, ಸಂಘಟನಾತ್ಮಕ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸುಮಾರು ತಿಂಗಳುಗಳಿಂದ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು ಆಗುತ್ತಿರುವ ಚರ್ಚೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
ಹೌದು.. ಇದೇ ಕಾರಣಕ್ಕಾಗಿ ಈಗಾಗಲೇ ದೆಹಲಿಗೆ ತೆರಳಿರುವ ಸಚಿವ ಸತೀಶ್ ಜಾರಕಿಹೊಳಿಯವರು, ಇಂದು ‘ಕೈ’ ಹೈಕಮಾಂಡ್ನ ಭೇಟಿಯಾಗುತ್ತಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ರಾಜ್ಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಸಿಎಂ, ಡಿಸಿಎಂ ಖಾತೆ ಬಗ್ಗೆಯೂ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆ ಪರಿಗಣಿಸಿ ಖಾತೆ ಬದಲಾವಣೆಗೆ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ಹಿರಿಯ ನಾಯಕರನ್ನು ಕರೆತಂದು ಜವಬ್ದಾರಿ ನೀಡುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಹಿನ್ನೆಲೆ ಇವತ್ತು ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಎರಡು ಸ್ಕೂಲ್ ಬಸ್ಗಳ ಮಧ್ಯೆ ಭೀಕರ ಅಪಘಾತ – ತಪ್ಪಿದ ಭಾರೀ ಅನಾಹುತ!
