ಕೇರಳದ ಆಳ ಸಮುದ್ರಲ್ಲಿ ಬೃಹತ್ ಕಂಟೈನರ್ ​ಹಡಗು ಸ್ಫೋಟ – 18 ಸಿಬ್ಬಂದಿಯ ರಕ್ಷಣೆ, ನಾಲ್ವರು ನಾಪತ್ತೆ!

270 ಮೀಟರ್ ಉದ್ದದ ಸಿಂಗಾಪುರದ MV ವಾನ್ ಹೈ 503 ಹಡಗು ಜೂನ್ 7ರಂದು ಕೊಲಂಬೊದಿಂದ 650ಕ್ಕೂ ಹೆಚ್ಚು ಕಂಟೇನರ್‌ಗಳನ್ನ ಹೊತ್ತು ಮುಂಬೈ ಕಡೆಗೆ ತೆರಳುತಿತ್ತು. ಕೇರಳ ಕರಾವಳಿಯಲ್ಲಿ ಸಾಗುತ್ತಿದ್ದಾಗ ಹಡಗಿನ ಒಳ ಭಾಗದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಕಂಟೇನರ್‌ಗಳಿಂದ ತುಂಬಿದ್ದ ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕೇರಳ ಕರಾವಳಿಯ ಕೋಝಿಕೋಡ್ ಮತ್ತು ಕಣ್ಣೂರಿನಿಂದ ಪಶ್ಚಿಮಕ್ಕೆ ಸುಮಾರು 120 ಕಿಲೋ ಮೀಟರ್​ ದೂರದಲ್ಲಿ ಈ ಅವಘಡ ಸಂಭವಿಸಿದೆ. ಕ್ಷಣಮಾತ್ರ ಹಡಗು ಬೆಂಕಿಯ ಜ್ವಾಲೆಗೆ ನಡುಗಿದೆ.

18 ಸಿಬ್ಬಂದಿ ರಕ್ಷಣೆ, ಉಳಿದ ನಾಲ್ವರಿಗಾಗಿ ಶೋಧ : ಬೆಂಕಿ ಅವಘಡದ ಮಾಹಿತಿ ಲಭಿಸುತ್ತಿದ್ದಂತೆ ಭಾರತೀಯ ನೌಕಾಪಡೆ ಅಲರ್ಟ್ ಆಗಿದೆ ತಕ್ಷಣವೇ INS ಸೂರತ್ ಹಡಗನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಂಟೈನರ್ ಹಡಗಿನಿಂದ 22 ಜನರ ಪೈಕಿ 18 ಸಿಬ್ಬಂದಿಯನ್ನ ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ರಕ್ಷಣೆ ಮಾಡಿದೆ. ಉಳಿದ ನಾಲ್ವರು ಕಣ್ಮರೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

ರಕ್ಷಣೆಗೊಳಗಾದ 18 ಮಂದಿ ಸಿಬ್ಬಂದಿಯನ್ನ ಆಳಸಮುದ್ರದಿಂದ ನವ ಮಂಗಳೂರು ಬಂದರುಗೆ ಕರೆತರಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ನಾಲ್ವರಿಗೆ ಭಾಗಶಃ ಗಾಯಗಳಾಗಿದೆ. ಆರು ಮಂದಿಯನ್ನ ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ 12 ಮಂದಿಗೆ ನಗರದ ಹೊಟೇಲ್​ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ಹಡಗಿನಲ್ಲಿ ನಾಲ್ಕು ವಿಧದ ರಾಸಾಯನಿಕ ವಸ್ತುಗಳನ್ನ ಸಾಗಿಸಲಾಗುತ್ತಿತ್ತು. ಪ್ರಬಲವಾದ ಗಾಳಿಗೆ ಮತ್ತು ಘರ್ಷಣೆಗೆ ಒಡ್ಡಿಕೊಂಡಾಗ ಹಡಗಿನಲ್ಲಿದ್ದ ರಾಸಾಯನಿಕಗಳಲ್ಲಿ ಬೆಂಕಿ ಹೊತ್ತಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಹಡಗಿನಲ್ಲಿ ವಿಷಕಾರಿ ವಸ್ತುಗಳು ಸಹ ಇವೆ ಎಂದು ಹೇಳಲಾಗುತ್ತಿದೆ. ದುರಂತದಲ್ಲಿ 20 ಕಂಟೈನರ್‌ಗಳು ಸಮುದ್ರಕ್ಕೆ ಬಿದ್ದಿವೆ. ಇನ್ನುಳಿದ ನಾಲ್ವರಿಗಾಗಿ ಶೋಧ ನಡೀತಿದೆ.

ಇದನ್ನೂ ಓದಿ : ಕಾಲ್ತುಳಿತ ದುರಂತ -​ ಸಿದ್ದರಾಮಯ್ಯ ಸರ್ಕಾರಕ್ಕೆ ಇವತ್ತು ಮಹತ್ವದ ದಿನ.. ಹೈಕೋರ್ಟ್​ನಲ್ಲಿ PIL ವಿಚಾರಣೆ!

Btv Kannada
Author: Btv Kannada

Read More