ಬೆಂಗಳೂರು : ಇನ್ಮುಂದೆ ಬೆಂಗಳೂರಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಬಿಬಿಎಂಪಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇ-ಖಾತಾವನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಜುಲೈ 1ರಿಂದಲೇ ಈ ನಿಮಯ ಜಾರಿಯಾಗುತ್ತಿದೆ.
ಈ ಬಗ್ಗೆ ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್ ಅವರು ಮಾಹಿತಿ ನೀಡಿದ್ದು, ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಿದ್ದಾರೆ.
ಹಳೆಯ ವಿಧಾನ ರದ್ದು : ಈ ಹೊಸ ನಿಯಮ ಜಾರಿಗೆ ತಂದ ಬೆನ್ನಲ್ಲೇ ಈ ಹಿಂದೆ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಇಒಡಿಬಿ-ಒಬಿಪಿಎಸ್ ತಂತ್ರಾಂಶದ ಮೂಲಕ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್ ನಲ್ಲಿ ನೀಡಲಾಗುತ್ತಿರುತ್ತದೆ. ಪಾಲಿಕೆಯ ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿರುತ್ತದೆ. ಇಂತಹ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ.
ಇ-ಖಾತಾ ಸಲ್ಲಿಸುವುದು ಅವಶ್ಯ : ಪಾಲಿಕೆಯ ನಗರ ಯೋಜನಾ ವಿಭಾಗದಿಂದ ನಕ್ಷೆ ಮಂಜೂರಾತಿ ನೀಡುತ್ತಿರುವ ಇಒಡಿಬಿ-ಒಬಿಪಿಎಸ್ ಆನ್ ಲೈನ್ ತಂತ್ರಾಂಶವನ್ನು ಪಾಲಿಕೆಯ ಕಂದಾಯ ವಿಭಾಗದಿಂದ ಇ-ಖಾತಾ ನೀಡುತ್ತಿರುವ ಇ-ಆಸ್ತಿ ತಂತ್ರಾಂಶದೊಂದಿಗೆ ಏಕೀಕರಣಗೊಳಿಸಲು ಕ್ರಮ ಜರುಗಿಸಲಾಗಿದೆ. ನಿವೇಶನ /ಸ್ವತ್ತಿನ ಕಂದಾಯ ದಾಖಲಾತಿಗಳ ಪರಿಶೀಲನಾ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಕೈಗೊಳ್ಳಲು ಜುಲೈ 1 ರಿಂದ ಸ್ವತ್ತಿನ ಇ – ಖಾತಾ / ಇಪಿಐಡಿ ಸಂಖ್ಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ-ಖಾತಾ ಸಲ್ಲಿಸುವುದು ಅವಶ್ಯವಿರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ಇದರಿಂದಾಗಿ ಪಾಲಿಕೆಯ ಕಂದಾಯ ವಿಭಾಗಕ್ಕೆ ಸ್ವತ್ತಿನ ದಾಖಲಾತಿಗಳ ಪರಿಶೀಲನೆಗಾಗಿ ಸಲ್ಲಿಸುವ ಕ್ರಮವನ್ನು ಹೊರತುಪಡಿಸಿರುವುದರಿಂದ ಪಾಲಿಕೆಯು ನೀಡುವ ಸೇವೆಗಳನ್ನು ಸರಳೀಕರಣಗೊಳಿಸಲು ಹಾಗೂ ಕಾಲಮಿತಿಯಲ್ಲಿ ನಕ್ಷೆ ಮಂಜೂರಾತಿ ನೀಡಲು ಸಹಕಾರಿಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಡಿಜಿ-ಐಜಿಪಿಯಾಗಿ ಡಾ.ಎಂ.ಎ.ಸಲೀಂ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ!
