ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ASP ಸಾವು, ಹಲವರಿಗೆ ಗಾಯ!

ನವದೆಹಲಿ : ಛತ್ತಿಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಸ್ಥಳೀಯ ಎಎಸ್ಪಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತ ಎಎಸ್‌ಪಿಯನ್ನು (ASP) ಆಕಾಶ್ ರಾವ್ ಗಿರಿಪುಂಜೆ ಎಂದು ಗುರುತಿಸಲಾಗಿದೆ.

ಕೊಂಟಾ-ಎರಾಬೋರ್ ರಸ್ತೆಯ ದೋಂಡ್ರಾ ಬಳಿ ನಡೆದ ಘಟನೆಯಲ್ಲಿ ಡಿಎಸ್‌ಪಿ ಮತ್ತು ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊಂಟಾದಲ್ಲಿ ನಕ್ಸಲರೇ ಪೊಲೀಸರನ್ನ ಟ್ರ್ಯಾಪ್‌ ಮಾಡಿದ್ದಾರೆ. ಮೊದಲು ಸುಳ್ಳು ಸುದ್ದಿಯೊಂದನ್ನ ಹಬ್ಬಿಸಿದ್ದಾರೆ, ಇದನ್ನ ನಂಬಿ ಪೊಲೀಸರ ತಂಡ ಹೊರಕೆ ಬರ್ತಿದ್ದಂತೆ ಐಇಡಿ ಸ್ಫೋಟಗೊಂಡಿದೆ. ಈ ವೇಳೆ ಗಿರಿಪುಂಜೆ ಜೊತೆಗೆ ಇತರ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಎಲ್ಲರನ್ನು ಚಿಕಿತ್ಸೆಗಾಗಿ ಕೊಂಟಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ಎಎಸ್ಪಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಜೂನ್‌ 10ರಂದು ಸಿಪಿಐ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಮುಂಚಿತವಾಗಿ ಸಂಭಾವ್ಯ ನಕ್ಸಲ್‌ ಚಟುವಟಿಕೆ ತಡೆಗಟ್ಟುವ ಕರ್ತವ್ಯದಲ್ಲಿ ಗಿರಿಪುಂಜೆ ನಿರತರಾಗಿದ್ದರು. ಈ ತಿಂಗಳ ಆರಂಭದಲ್ಲಿ ಪಿಎಲ್‌ಜಿಎ ಬೆಟಾಲಿಯನ್‌ನ ಇಬ್ಬರು ಸದಸ್ಯರು ಸೇರಿದಂತೆ 16 ನಕ್ಸಲರು ಸುಕ್ಮಾದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದರು. ಈ ಪೈಕಿ 6 ಜನರ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಮತ್ತೊಬ್ಬರು ಮಹಿಳೆ ಮತ್ತು ಒಬ್ಬ ಪುರುಷ ಕೇಡರ್‌ಗೆ ತಲಾ 8 ಲಕ್ಷ ರೂ. ಬಹುಮಾನವಿತ್ತು.

ಇದನ್ನೂ ಓದಿ : ಬೆಳಗಾವಿ : ಮೇವು ತರಲು ಹೋಗಿದ್ದ ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು!

Btv Kannada
Author: Btv Kannada

Read More