ಬೆಂಗಳೂರು : ಆರ್ಸಿಬಿ ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಜನರನ್ನ ಬಲಿ ಪಡೆದಿದ್ದ ಚಿನ್ನಸ್ವಾಮಿ ಸ್ಟೇಡಿಯಂಗೆ ಕಂಟಕ ತಟ್ಟಿದಂತಾಗಿದೆ. ಇತ್ತ ಕಾಲ್ತುಳಿತ ದುರಂತದ ಪ್ರಕರಣ ಎದುರಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಅನಧಿಕೃತವಾಗಿ ಜಾಹೀರಾತು ಪ್ರದರ್ಶನ ಮಾಡಿ ಪೋಸ್ ಕೊಡುತ್ತಿದ್ದ ಕ್ರಿಕೆಟ್ ಅಕಾಡೆಮಿಗೆ ಇದೀಗ ಬಿಬಿಎಂಪಿ ನೋಟಿಸ್ ಶಾಕ್ ಕೊಟ್ಟಿದೆ.
ಹೌದು.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸುತ್ತಿರುವ ಕೆಎಸ್ಸಿಎಗೆ ಇದೀಗ ಬಿಬಿಎಂಪಿ ಕೂಡ ಶಾಕ್ ನೀಡಿದೆ. ಬಿಬಿಎಂಪಿ ಕಾಯ್ದೆ ಉಲ್ಲಂಘನೆ ಮಾಡಿ ಹಲವು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಅನಧಿಕೃತವಾಗಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿರುವ ಕೆಎಸ್ಸಿಎ, ಸರಿಸುಮಾರು 10 ಕೋಟಿ ರೂ. ಜಾಹೀರಾತು ತೆರಿಗೆ ಬಾಕಿ ಉಳಿಸಿಕೊಂಡಿದೆ.
ಜಾಹೀರಾತು ನಿಯಮಗಳ ಅನ್ವಯ ರೂಲ್ಸ್ ಬ್ರೇಕ್ ಮಾಡಿದ್ದ ಕೆಎಸ್ಸಿಎಗೆ ಈ ಹಿಂದೆ ಕೂಡ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ತೆರಿಗೆ ಪಾವತಿಯಾಗಿರಲಿಲ್ಲ. ಇದೀಗ ಕಬ್ಬಿಣ ಕಾದಾಗ ತಟ್ಟಬೇಕು ಅನ್ನೋ ಪ್ಲಾನ್ ಅನುಸರಿಸೋಕೆ ಹೊರಟಿರುವ ಪಾಲಿಕೆ ಮತ್ತೆ ನೋಟಿಸ್ ಜಾರಿ ಮಾಡಿದೆ. ಇನ್ನು ತೆರಿಗೆ ಬಾಕಿ ಜೊತೆಗೆ ದಂಡಾಸ್ತ್ರ ಪ್ರಯೋಗಕ್ಕೂ ಪಾಲಿಕೆ ಸಜ್ಜಾಗಿದ್ದು, ಈ ಬಾರೀ ಬಾಕಿ ಪಾವತಿಸದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳೋದಾಗಿ ಕೂಡ ಎಚ್ಚರಿಕೆ ನೀಡಿದೆ.
ಸದ್ಯ ಯಾವುದೇ ಪೂರ್ವ ತಯಾರಿ ಇಲ್ಲದೇ ಆರ್ಸಿಬಿ ಕಪ್ ಸಂಭ್ರಮಾಚರಣೆ ಆಚರಿಸಿ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್ಸಿಎಗೆ ಇದೀಗ ಏಟಿನ ಮೇಲೆ ಮತ್ತೊಂದು ಏಟು ಅನ್ನೋ ಹಾಗೇ ಪಾಲಿಕೆ ಕೂಡ ಸವಾರಿ ಮಾಡುವುದಕ್ಕೆ ತಯಾರಾಗಿ ನಿಂತಿದೆ. ಇತ್ತ ಕಾಲ್ತುಳಿತ ದುರಂತದ ಬಳಿಕ ವಿಚಾರಣೆ ಎದುರಿಸ್ತಿರೋ ಕೆಎಸ್ಸಿಎ ಇದೀಗ ಪಾಲಿಕೆಗೆ ಬಾಕಿ ಹಣ ಪಾವತಿ ಮಾಡುತ್ತ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ : ಖಾತೆ ಬದಲಾಯಿಸಲು ನಾನು ಕೇಳಿಲ್ಲ.. ಇದೆಲ್ಲಾ ಸುಳ್ಳು ಸುದ್ದಿ – ಪರಮೇಶ್ವರ್ ಗರಂ!
