ಅಮರಾವತಿ : ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ದಿನದ ಗರಿಷ್ಠ ಕೆಲಸದ ಅವಧಿಯನ್ನು ಒಂದು ಗಂಟೆಯಷ್ಟು ಹೆಚ್ಚಳ ಮಾಡುವುದಕ್ಕೆ ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಸದ್ಯ ಕೆಲಸದ ಅವಧಿ ದಿನಕ್ಕೆ 9 ಗಂಟೆ ಇದ್ದು, ಇದನ್ನು ದಿನಕ್ಕೆ 10 ಗಂಟೆಗೆ ಹೆಚ್ಚಿಸಲಾಗುವುದು. ನೂತನ ವ್ಯವಸ್ಥೆಯನ್ನು ಹೂಡಿಕೆದಾರರು ಮತ್ತು ಕಾರ್ಮಿಕ ಸ್ನೇಹಿಯನ್ನಾಗಿ ಮಾಡುವ ಸಂಬಂಧ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುವುದು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ.ಪಾರ್ಥಸಾರಥಿ ಹೇಳಿದ್ದಾರೆ.
ಇಂತಹ ತಿದ್ದುಪಡಿಗಳಿಂದ ಹೂಡಿಕೆದಾರರು ರಾಜ್ಯದತ್ತ ಮುಖ ಮಾಡುವರು. ನೂತನ ನಿಯಮಗಳು ಕೂಡ ಕಾರ್ಮಿಕ ಸ್ನೇಹಿಯಾಗರಲಿದ್ದು, ಹೂಡಿಕೆ ಹೆಚ್ಚಳಕ್ಕೆ ಅನುಕೂಲವಾಗಲಿವೆ. ಜಾಗತಿಕ ಮಟ್ಟದ ನಿಯಮಗಳಿಗೆ ಅನುಗುಣವಾಗಿಯೇ ಈ ತಿದ್ದುಪಡಿಗಳನ್ನು ತರಲಾಗುತ್ತಿದೆ. ಸೆಕ್ಷನ್ 55ರ ಅಡಿಯಲ್ಲಿ, 5ಗಂಟೆ ಕೆಲಸದ ನಡುವೆ 1 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು, ಅದನ್ನೀಗ 6 ತಾಸಿಗೊಮ್ಮೆ ನೀಡಲಾಗುವುದು. 75 ಗಂಟೆಗಳಿದ್ದ ಹೆಚ್ಚುವರಿ ಅವಧಿ ಕೆಲಸ (OT) ಮಿತಿಯನ್ನು ಈಗ 144 ಗಂಟೆಗೆ ಏರಿಸಲಾಗಿದೆ. ಮಹಿಳೆಯರಿಗಾಗಿ ರಾತ್ರಿ ಪಾಳೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂದು ಪಾರ್ಥಸಾರಥಿ ಮಾಹಿತಿ ನೀಡಿದರು.
ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ಟೀಕಿಸಿದ್ದಾರೆ.
ಇದನ್ನೂ ಓದಿ : ಕಾಲ್ತುಳಿತ ಪ್ರಕರಣದ ತನಿಖೆಗಿಳಿದ ಸಿಐಡಿ – ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ.. ಇಂಚಿಂಚೂ ಮಾಹಿತಿ ಸಂಗ್ರಹ!
