ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ಈ ಪ್ರಕರಣವನ್ನು ನ್ಯಾಯಮೂರ್ತಿ ಮೈಕೆಲ್ ಡಿಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಸಿಐಡಿ ತನಿಖೆಗೂ ವಹಿಸಲಾಗಿದೆ. ಸಿಐಡಿ ವಿಶೇಷ ವಿಚಾರಣಾ ದಳದ ಎಸ್ಪಿ ಶೋಭಾನ್ವಿತಾ ನೇತೃತ್ವದಲ್ಲಿ ಇಂದಿನಿಂದ ತನಿಖೆ ಆರಂಭವಾಗಿದೆ.
ಅದರಂತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ, ಕಾಲ್ತುಳಿತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ಇಂಚಿಚೂ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಗೇಟ್ ನಂಬರ್ 7, 19, 18, 16 ಮತ್ತು 21ರ ಬಳಿ ಹೆಚ್ಚು ಅನಾಹುತ ಆಗಿತ್ತು. ಅಲ್ಲಿಗೆ ಭೇಟಿ ನೀಡಿದ ಸಿಐಡಿ ತಂಡ ಪರಿಶೀಲನೆ ನಡೆಸಿದೆ.
ಇನ್ನು ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಸಿಐಡಿ ಅರ್ಜಿ ಸಲ್ಲಿಸಲಿದೆ. ಇಂದು ಸರ್ಕಾರಿ ರಜೆ, ನಾಳೆ ಭಾನುವಾರವಾಗಿರುವುದರಿಂದ, ಸೋಮವಾರ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ತಂಡ ಸಿದ್ಧತೆ ನಡೆಸಿದೆ.
ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ಸ್ಥಾನಕ್ಕೆ ಶಂಕರ್ ರಾಜೀನಾಮೆ : ಇದೆಲ್ಲದರ ನಡುವೆ ಹಠಾತ್ ಬೆಳವಣಿಗೆ ಎಂಬಂತೆ ನೈತಿಕ ಹೊಣೆ ಹೊತ್ತು ಕೆಎಸ್ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ್ ಮತ್ತು ಖಜಾಂಚಿ ಜಯರಾಮ್ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರವೇ ಕೆಎಸ್ಸಿಎ ಅಧ್ಯಕ್ಷರಿಗೆ ಇಬ್ಬರೂ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸದ್ಯ ಕೆಎಸ್ಸಿಎ ಜಂಟಿ ಸೆಕ್ರೆಟರಿ ಆಗಿರೋ ಶಾವೀರ್ ತಾರಪೂರ್ಗೆ ಇಬ್ಬರ ಹುದ್ದೆಯ ಹೊಣೆ ಹೊರಿಸಲಾಗಿದೆ.
ಇದನ್ನೂ ಓದಿ : ಪ್ರಿಯಕರನೊಂದಿಗೆ ಚಕ್ಕಂದವಾಡ್ತಾ ಸಿಕ್ಕಿಬಿದ್ದ ಪತ್ನಿ – ಆಕೆಯ ರುಂಡವನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ಬಂದ ಪತಿ!
