ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ, ಆಕ್ಷೇಪಾರ್ಹ ಸಂದೇಶಗಳನ್ನು ಹರಿಯಬಿಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇದೀಗ ಅವರ ಕ್ಷಮಾಪಣೆಯನ್ನೇ ಟ್ರೋಲ್ ಮಾಡುವ ಮೂಲಕ ನಗರ ಪೊಲೀಸರು ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಹೌದು.. ಸಾಮಾಜಿಕ ಜಾಲತಾಣದಲ್ಲಿಸಾಮಾಜಿಕ ಶಾಂತಿಗೆ ಧಕ್ಕೆಯಾಗುವಂತಹ ಯಾವುದೇ ಸಂದೇಶಗಳನ್ನು ಹಾಕದಂತೆ ಮಂಗಳೂರು ನಗರದ ಖಡಕ್ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಪದೇ ಪದೆ ಎಚ್ಚರಿಕೆ ನೀಡಿದ್ದರೂ ಸಹ ಕೆಲವರು ತಮ್ಮ ಚೇಷ್ಟೆ ಬುದ್ಧಿ ಮುಂದುವರಿಸಿದ್ದು, ಅದಕ್ಕೆ ಪ್ರತಿಯಾಗಿ ಇದೀಗ ಪೊಲೀಸರು ಮೆಗಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇನ್‌ಸ್ಟ್ರಾಗ್ರಾಂನಲ್ಲಿ ಪ್ರಚೋದನಾಕಾರಿ ಸಂದೇಶ ಹರಿ ಬಿಟ್ಟಿದ್ದ ಉಡುಪಿ ಜಿಲ್ಲೆಯ ಹೆಜಮಾಡಿ ಗ್ರೀನ್ ಹೌಸ್ ಎನ್.ಎಸ್.ರೋಡ್ ನಿವಾಸಿ ಮೊಹಮ್ಮದ್ ಅಸ್ಲಂ (23), ಇಡ್ಯಾ ಗ್ರಾಮದ ಕಾಟಿಪಳ್ಳ ಆಶ್ರಯ ಕಾಲೊನಿ ನಿವಾಸಿ ಚೇತನ್ (20), ಚೇಳಾಧಿೖರ್‌ನ ನಿತಿನ್ ಅಡಪ (23), ಫರಂಗಿಪೇಟೆ ಅರ್ಕುಳ, ಕೊಪ್ಪಲ್‌ಹೌಸ್‌ನ ರಿಯಾಝ್ ಇಬ್ರಾಹಿಂ (30), ಹಳೆಯಂಗಡಿ ಕೊಳವೈಲ್‌ನ ಗುರುಪ್ರಸಾದ್ ಎಂಬವರನ್ನು ಬಂಧಿಸಿದ್ದಾರೆ.
ಸದ್ಯ ಪೊಲೀಸರ ಮೆಗಾ ಆಪರೇಷನ್ಗೆ ಟ್ರೋಲ್ ವೀರರು ನಲುಗಿ ಬೆಂಡಾಗಿದ್ದಾರೆ. ವಿದೇಶದಲ್ಲಿ ಕುಳಿತು ಕರಾವಳಿಗೆ ಬೆಂಕಿ ಹಚ್ಚುತ್ತಿದ್ದ ಟ್ರೋಲಿಗರು, ಸೋಶಿಯಲ್ ಮೀಡಿಯಾ ಮೂಲಕ ದ್ವೇಷ ಹರಡುತ್ತಿದ್ದರು. ಮುಸ್ಲಿಮರ ಹೆಸರಿನಲ್ಲಿ ನಕಲಿ ಸಿಮ್ ಖರೀದಿಸಿ ಹಿಂದುಗಳಿಗೆ ಪ್ರಚೋದನೆ, ಹಿಂದೂಗಳ ಹೆಸರಿನ ನಕಲಿ ಸಿಮ್ ಖರೀದಿಸಿ ಮುಸ್ಲೀಮರಿಗೆ ಪ್ರಚೋದನೆ.. ಹೀಗೆ ಸೌದಿಯಿಂದಲೇ ಸೋಶಿಯಲ್ ಮೀಡಿಯಾ ಮೂಲಕ ಕೆಲ ಆರೋಪಿಗಳು ಸಂಚು ಮಾಡುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳುನ್ನು ಬಂಧಿಸಿ ಕೊಬ್ಬು ಇಳಿಸಿದ್ದಾರೆ.
ಕಮಿಷನರ್ ಮಾತು : ಸೋಷಿಯಲ್ ಮಿಡಿಯಾದಲ್ಲಿ ಪ್ರಚೋದನಾತ್ಮಕ ಸಂದೇಶ ಹಾಕುತ್ತಿದ್ದವರ ಪತ್ತೆಗೆ ತಂಡವೊಂದನ್ನು ರಚಿಸಲಾಗಿದ್ದು, 4 ದಿನದಲ್ಲಿ 5 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಕೆಲವರ ಬಂಧನ ಬಾಕಿಯಿದ್ದು, ಕಾಯ್ತಾ ಇರಿ. ಬಂಧಿತರಲ್ಲಿ ವಿದೇಶದಲ್ಲಿಉದ್ಯೋಗದಲ್ಲಿದ್ದವರೂ ಇದ್ದಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ಜಾಗೃತಿ ಸಂದೇಶ
- ಸತ್ಯಾಸತ್ಯತೆ ಪರಿಶೀಲಿಸದೆ ಪೋಸ್ಟ್‌ಗಳನ್ನು ಹರಡಬೇಡಿ.
- ಧರ್ಮ, ಜಾತಿ ಆಧಾರದ ಮೇಲೆ ಕಿಡಿಗೇಡಿತನ ಸಂದೇಶ ಶೇರ್ ಮಾಡದಿರಿ.
- ನಿಂದನಾತ್ಮಕ ವಿಡಿಯೊ, ಚಿತ್ರ, ಸಂದೇಶ ಟ್ರೋಲ್ ಮಾಡದಿರಿ.
- ಅನುಮಾನಾಸ್ಪದ ಪೋಸ್ಟ್‌ಗಳನ್ನು ಪೊಲೀಸ್ ಠಾಣೆಗೆ ವರದಿ ಮಾಡಿ.
- ಜವಾಬ್ದಾರಿಯುತವಾಗಿ ಸಾಮಾಜಿಕ ಜಾಲತಾಣ ಬಳಸಿ.
ಇದನ್ನೂ ಓದಿ : ಕಾಲ್ತುಳಿತ ಕೇಸ್ – ಇಂದಿನಿಂದ ಸಿಐಡಿ SP ಶೋಭಾನ್ವಿತ ನೇತೃತ್ವದಲ್ಲಿ ತನಿಖೆ ಆರಂಭ!
