ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್ವೊಂದು ಮೆಟ್ರೋ ಪಿಲ್ಲರ್‌ಗೆ (ನಂ.607) ಡಿಕ್ಕಿಯಾದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು-ಮೈಸೂರು ರಸ್ತೆಯ ಮೈಲಸಂದ್ರದ ಬಳಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು, ಬಸ್ ಚಾಲಕ, ಕಂಡಕ್ಟರ್ ಸೇರಿ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಿಎಂಟಿಸಿ ಬಸ್ ಕೆ.ಆರ್.ಮಾರ್ಕೆಟ್ನಿಂದ ಬಿಡದಿಗೆ ತೆರಳುತ್ತಿತ್ತು. ಸುಮಾರು 50 ಪ್ರಯಾಣಿಕರು ಬಸ್‌ನಲ್ಲಿದ್ದರು. ಮೈಲಸಂದ್ರದ ಬಳಿ ಹೋಗುವಾಗ ಏಕಾಏಕಿ ಬಸ್‌ನ ಸ್ಟೇರಿಂಗ್ ರಾಡ್ ಮುರಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ಬಳಿಕ ತಕ್ಷಣ ಎಲ್ಲ ಪ್ರಯಾಣಿಕರು ಬಸ್‌ನಿಂದ ಕೆಳಗೆ ಇಳಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಪೊಲೀಸರು ಬಸ್ ಅನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ಓದಿ : ಬೆಂಗಳೂರು ವಿವಿ ಉಪಕುಲಪತಿ ನಿರಂಜನ್ ವಿರುದ್ಧ FIR!
