ಬೆಂಗಳೂರು ವಿವಿ ಉಪಕುಲಪತಿ ನಿರಂಜನ್ ವಿರುದ್ಧ FIR!

ಕೋಲಾರ : ಜಾತಿನಿಂದನೆ ಆರೋಪದಡಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ ನಿರಂಜನ್​ ವಾನಳ್ಳಿ ವಿರುದ್ಧ ನಗರದ ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ.

ಉಪ ಕುಲಪತಿ ಪ್ರೊ. ನಿರಂಜನ್​ ವಾನಳ್ಳಿ
ಉಪ ಕುಲಪತಿ ಪ್ರೊ. ನಿರಂಜನ್​ ವಾನಳ್ಳಿ

ಗಲ್‌ಪೇಟೆ ಪೊಲೀಸರು ನಿರಂಜನ್​ ವಾನಳ್ಳಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ತಿದ್ದುಪಡಿ ಬಿಲ್‌ 2015 ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಎಫ್‌ಐಆರ್‌ ದಾಖಲು ಮಾಡದ ಹಿನ್ನೆಲೆಯಲ್ಲಿ ಡಾ.ಆರ್‌. ಮಂಜುನಾಥ್‌ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅದರಂತೆ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು ಉತ್ತರ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ವಿವಿಯಲ್ಲಿ ಹಣ ದುರುಪಯೋಗದ ಬಗ್ಗೆ ಕುಲಪತಿಗಳ ಗಮನಕ್ಕೆ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ತಂದಿದ್ದೇನೆ. ಇತ್ತೀಚೆಗೆ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ 125 ಸಿಸಿ ಕ್ಯಾಮೆರಾ 99,230 ಮೀಟರ್‌ ಕೇಬಲ್‌ ಖರೀದಿಸಲು ಮುಂದಾದಾಗ, ಇದರಲ್ಲಿ 25 ಲಕ್ಷ ರೂ.ಗಳನ್ನು ವಿವಿಗೆ ಉಳಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಷಯವಾಗಿ ಕುಲಪತಿಗಳು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದು, ಅದರ ಭಾಗವಾಗಿ 2024ರ ಡಿಸೆಂಬರ್‌ ಹಾಗೂ 2025ರ ಫೆಬ್ರುವರಿಯಲ್ಲಿ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಹೆಚ್ಚುವರಿ ಕಾರ್ಯಸೂಚಿಯಾಗಿ ನನ್ನ ವಿರುದ್ಧ ಯಾರೂ ದೂರು ನೀಡದೆ ಇದ್ದರೂ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ಹಿಂದಿನಿಂದಲೂ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದ ಕುಲಪತಿಗಳು ಈ ಸಭೆಗಳಲ್ಲಿ ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುತ್ತಿರುವುದಾಗಿ ಸುಳ್ಳು ಆರೋಪ ಹೊರಿಸಿ ನನ್ನ ಮಾನಹಾನಿ ಮಾಡಿರುತ್ತಾರೆ. ಜತೆಗೆ ಜಾತಿಯ ಕಾರಣಕ್ಕಾಗಿ ಹಲವು ಆರೋಪಗಳನ್ನು ಮಾಡಿದ್ದು, ಖುದ್ದಾಗಿ ಸಿಂಡಿಕೇಟ್‌ ಸದಸ್ಯರೇ ಈ ವಿಷಯಗಳು ಚರ್ಚೆಯಾಗಿಲ್ಲವೆಂದು ತಿಳಿಸಿದ್ದಾರೆ.

ಮುಂದುವರಿದು ಕೆಸಿಎಸ್‌ಆರ್‌ ನಿಯಮದಂತೆ ನನ್ನ ಮೇಲೆ ಕ್ರಮ ವಹಿಸಲು ನಿರ್ಣಯಿಸಿದ್ದು, ಅತಿಥಿ ಉಪನ್ಯಾಸಕರಿಗೆ ಕೆಸಿಎಸ್‌ಆರ್‌ ಕಾಯ್ದೆ ಅನ್ವಯಿಸುವುದಿಲ್ಲ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಹೊರಸಿ ನನಗೆ ಮಾನಹಾನಿ ಮಾಡಿದ್ದಾರೆ. ಜತೆಗೆ ನನಗೆ ಜಾತಿ ನಿಂದನೆ ಮಾಡಿ ಸಮಾಜದಲ್ಲಿ ನನ್ನ ಗೌರವವನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ : ಯೋಗೀಶ್ ಗೌಡ ಹತ್ಯೆ ಕೇಸ್ – ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ! 

Btv Kannada
Author: Btv Kannada

Read More