ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ.ಬಿ ದಯಾನಂದ್ ಅವರನ್ನು ಸರ್ಕಾರ ಅಮಾನತು ಮಾಡಿದ ಬೆನ್ನಲ್ಲೇ ನಗರದ ನೂತನ ಪೊಲೀಸ್ ಆಯುಕ್ತರಾಗಿ ಖಡಕ್ ಆಫೀಸರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿದೆ.
ಬಿ. ದಯಾನಂದ್ ಸಸ್ಪೆಂಡ್ ಹಿನ್ನೆಲೆ ಮಿಡ್ ನೈಟ್ ಚಾರ್ಜ್ ಪಡೆಯಲು ಹಿರಿಯ IPS ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಮಧ್ಯರಾತ್ರಿ 12.15ಕ್ಕೆ ಸೀಮಂತ್ ಕುಮಾರ್ ಸಿಂಗ್ ಅವರು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನೂತನ ಕಮಿಷನರ್ ಸೀಮಂತ್ ಕುಮಾರ್ ಅವರನ್ನು ಹಿರಿಯ ಅಧಿಕಾರಿಗಳು, ಡಿಸಿಪಿಗಳು ಸ್ವಾಗತಿಸಿದ್ದು, ಅಧಿಕಾರ ಸ್ವೀಕರಿಸಿದ ಬಳಿಕ ನಗರದ ಅಧಿಕಾರಿಗಳ ಜೊತೆ ಕಮಿಷನರ್ ಕಿರು ಸಭೆ ನಡೆಸಿದ್ದಾರೆ.
ಬಳಿಕ ಮಾತಾಡಿದ ನೂತನ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಆದೇಶದ ಮೇಲೆ ಅಧಿಕಾರ ಸ್ವೀಕರಿಸಿದ್ದೇನೆ. ಹಿಂದಿನ ಕಮಿಷನರ್ಗಳು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಅದನ್ನ ಮುಂದುವರೆಸಿಕೊಂಡು ಹೋಗುತ್ತೇನೆ. ಕಾಲ್ತುಳಿತ ಪ್ರಕರಣದ ಬಗ್ಗೆ ಈಗಲೇ ನಾನು ಏನು ಪ್ರತಿಕ್ರಿಯೆ ನೀಡಲ್ಲ. ಅಧಿಕಾರಿಗಳೊಂದಿಗೆ ಸಭೆ ಮಾಡಿ ಅನಂತರ ಪ್ರತಿಕ್ರಿಯಿಸುತ್ತೇನೆ ಎಂದು ನೂತನ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಯಾರು ಈ ಸೀಮಂತ್ ಕುಮಾರ್ ಸಿಂಗ್? 1996 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಬಿಹಾರ ಮೂಲದ ಸೀಮಂತ್ ಕುಮಾರ್, ಈ ಹಿಂದೆ ಬೆಂಗಳೂರು ಪೂರ್ವ ವಲಯ ಹೆಚ್ಚುವರಿ ಆಯುಕ್ತರಾಗಿ, ಎಸಿಬಿಯಲ್ಲಿ ಎಡಿಜಿಪಿಯಾಗಿ, ಕೆಎಸ್ಆರ್ಪಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಬಿಎಂಟಿಎಫ್ (ಬೆಂಗಳೂರು ಮಹಾನಗರ ಕಾರ್ಯಪಡೆ) ಎಡಿಜಿಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಇದೀಗ ಬೆಂಗಳೂರಿಗೆ 39ನೇ ನೂತನ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.
ಸೀಮಂತ್ ಕುಮಾರ್ ಸಿಂಗ್ ಮಂಗಳೂರು ನಗರಕ್ಕೆ ಕಮಿಷನರೇಟ್ ಬಂದ ಬಳಿಕ ಮೊದಲ ಪೊಲೀಸ್ ಕಮಿಷನರ್ ಆಗಿದ್ದರು. 2000ದಿಂದ 2004ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆ ಬಳಿಕ 2014ರಲ್ಲಿ ಪಶ್ಚಿಮ ವಲಯದ ಐಜಿಪಿಯಾಗಿದ್ದರು. ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಡಿಐಜಿ ಮತ್ತು ನಕ್ಸಲ್ ನಿಗ್ರಹ ಪಡೆ (ANF)ನ ಕಮಾಂಡರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ : ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ IPS ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ನೇಮಕ!
