ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ.ಬಿ ದಯಾನಂದ್ ಅವರನ್ನು ಸರ್ಕಾರ ಅಮಾನತು ಮಾಡಿದ್ದು, ಈ ಬೆನ್ನಲ್ಲೇ ನಗರದ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ IPS ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿದೆ.
ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಗುರುವಾರ ತಡರಾತ್ರಿ ಹೊರ ಬಿದ್ದಿದ್ದು,1996ರ ಬ್ಯಾಚ್ ನ ಬಿಹಾರ ಮೂಲದ ಖಡಕ್ IPS ಅಧಿಕಾರಿ,
ಬೆಂಗಳೂರು ಮಹಾನಗರ ಕಾರ್ಯಪಡೆಯ ಎಡಿಜಿಪಿ ಆಗಿದ್ದ ಸೀಮಂತ್ ಕುಮಾರ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಆಡಳಿತ ವೈಫಲ್ಯದ ಕಳಂಕಕ್ಕೆ ಕಾರಣವಾಗಿರುವ ಆರ್‌ಸಿಬಿ ವಿಜಯೋತ್ಸವ ಸಂದರ್ಭದ ಕಾಲ್ತುಳಿತದ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರಾಜ್ಯ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರದಿಂದ ಹಲವರ ತಲೆದಂಡ : ಮುಖ್ಯವಾಗಿ ದುರಂತಕ್ಕೆ ಆರ್‌ಸಿಬಿ ತಂಡ, ಇವೆಂಟ್ ಮ್ಯಾನೇಜರ್ ಡಿಎನ್‌ಎ ಹಾಗೂ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಬೇಜವಾಬ್ದಾರಿತನ ಕಾರಣ ಎಂದು ಸರಕಾರ ತೀರ್ಮಾನಿಸಿದ್ದು, ಈ ಮೂರು ಸಂಸ್ಥೆಗಳನ್ನು ಪ್ರತಿನಿಧಿಸುವವರನ್ನು ಕೂಡಲೇ ಬಂಧಿಸಲು ಆದೇಶಿಸಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದುರಂತದ ಬಗ್ಗೆ ತೀವ್ರ ನೋವು ಹಾಗೂ ಕಳವಳ ವ್ಯಕ್ತವಾಗಿದೆ. ಸಂಪುಟ ಸಭೆ ಬಳಿಕ ಹಿರಿಯ ಸಚಿವರು ಹಾಗೂ ಅಧಿಕಾರಿಗಳನ್ನು ಕರೆಸಿಕೊಂಡು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಈ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ : ಕಾಲ್ತುಳಿತ ದುರಂತ – ಬೆಂಗಳೂರು ಕಮಿಷನರ್ ದಯಾನಂದ್ ಸೇರಿ ಐವರು ಅಧಿಕಾರಿಗಳು ಸಸ್ಪೆಂಡ್!
