ಕಾಲ್ತುಳಿತ ಪ್ರಕರಣ : ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್.. ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ!

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಆರ್​ಸಿಬಿ ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಸಂಭವಿಸಿದ ಘೋರ ಕಾಲ್ತುಳಿತ ಹಾಗೂ 11 ಜನರ ಸಾವಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

ಘಟನೆ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದ್ದು, ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಿಗದಿಪಡಿಸಿದೆ. ಹೈಕೋರ್ಟ್ ಕಟ್ಟಡದ ಮೇಲೂ ಜನರು ನಿಂತಿದ್ದರು. ಭದ್ರತಾ ಲೋಪವಾಗಿದೆ ಎಂದು ವಕೀಲ ಹೇಮಂತ್ ರಾಜ್, ಜಿ.ಆರ್.ಮೋಹನ್ ಅವರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಸದ್ಯ ಪತ್ರಿಕೆಗಳಲ್ಲಿ ಬಂದ ವರದಿ ಆಧರಿಸಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲಾಗಿದೆ. ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆ ತೀವ್ರ ಕಳವಳಕಾರಿಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ಹೇಳಿದ್ದು, ಸರ್ಕಾರ ಕೈಗೊಂಡಿದ್ದ ಭದ್ರತಾ ಕ್ರಮಗಳ ಮಾಹಿತಿ ನೀಡಲು ಪೀಠ ಸೂಚನೆ ನೀಡಿದೆ.

ವಿಚಾರಣೆ ವೇಳೆ, ಹೈಕೋರ್ಟ್​​​ನಲ್ಲಿ ಎಜಿ ಶಶಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಅವರು, ಹೈಕೋರ್ಟ್ ನೀಡುವ ಸೂಚನೆಗಳನ್ನು ಪಾಲಿಸಲಾಗುವುದು. ನಡೆದ ಘಟನೆ, ಸರ್ಕಾರದ ಕ್ರಮ ಎಲ್ಲದರ ಮಾಹಿತಿಯನ್ನು ಉಚ್ಚ ನ್ಯಾಯಾಲಯಕ್ಕೆ ನೀಡಲಾಗುವುದು ಎಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪೊಲೀಸ್ ಕಮಿಷನರ್​ ದಯಾನಂದ್​ ಭೇಟಿ : ಘಟನೆ ನಡೆದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಗುರುವಾರ ಭೇಟಿ ನೀಡಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂಬರ್ 6, 7, 21 ರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಜನ ಮೃತಪಟ್ಟಿದ್ದರು. ಹೀಗಾಗಿ ಆ ಜಾಗಗಳಿಗೆ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲ್ತುಳಿತದಿಂದ ಮೃತಪಟ್ಟವರು ಇವರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಈ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ. ಅವರನ್ನು, ದಿವ್ಯಾಶ್ರಿ (14), ಅಕ್ಷತಾ (25), ಭೂಮಿಕ್( 37), ಸಹನಾ (23), ಶ್ರವಣ (20), ಶಿವಲಿಂಗ್​​ (17), ಪೂರ್ಣಚಂದ್ರ (20), ಕಾಮಾಕ್ಷಿ ದೇವಿ (29), ಪ್ರಜ್ವಲ್ ( 22), ಚಿನ್ಮಯ ಶೆಟ್ಟಿ (19), ಮನೋಜ್ ಕುಮಾರ್ (20) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಕಾಲ್ತುಳಿತ ದುರಂತ – 11 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ.. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

 

Btv Kannada
Author: Btv Kannada

Read More