ಸಂಭ್ರಮ ಕಸಿದ ಘೋರ ಕಾಲ್ತುಳಿತ – RCB ಗೆಲುವಿನ ಖುಷಿಯಲ್ಲಿದ್ದ 11 ಅಭಿಮಾನಿಗಳ ಹೃದಯ ಕ್ಷಣದಲ್ಲೇ ಸ್ತಬ್ಧ!

ಬೆಂಗಳೂರು : 18 ವರ್ಷಗಳ ತಪ್ಪಸ್ಸಿನ ಟ್ರೋಫಿ ಕಣ್ತುಂಬಿಕೊಳ್ಳಲು ಹೋಗಿದ್ದ ಸಾವಿರಾರು ಅಭಿಮಾನಿಗಳ ಮಧ್ಯೆ ನಿನ್ನೆ ಘೋರ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಅಮಾಯಕರು ಉಸಿರು ಚೆಲ್ಲಿದ್ದಾರೆ.

ನೆಚ್ಚಿನ ಆರ್​ಸಿಬಿ ಆಟಗಾರರನ್ನು ನೋಡೋಕೆ ಅಂತ ಬಂದಿದ್ದ ಭೂಮಿಕ್ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ದಾನೆ. ನಾಗಸಂದ್ರ ಮೂಲದ ಭೂಮಿಕ್ (20)​, ಫ್ರೆಂಡ್ಸ್​ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ. ಆತನ ಎಲ್ಲಾ ಸ್ನೇಹಿತರು ಕ್ರೀಡಾಂಗಣದ ಒಳಗೋದ್ರೆ, ಭೂಮಿಕ್ ಮಾತ್ರ ಆಚೆಗೆ ಸಿಲುಕಿಕೊಂಡಿದ್ದ. ಆದರೆ ಇದೇ ವೆಲೆ ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದಾನೆ.

ಭೂಮಿಕ್
ಭೂಮಿಕ್

RCB ಅಭಿಮಾನಿಗಳ​ ನಡುವೆ ನೂಕುನುಗ್ಗಲು ವೇಳೆ ಉತ್ತರ ಕನ್ನಡ ಜಿಲ್ಲೆಯ ಅಕ್ಷತಾ ಸಾವನ್ನಪ್ಪಿದ್ದಾರೆ. ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಅಕ್ಷತಾ ಹಾಗೂ ಪತಿ ಆಶಯ್ ಇಬ್ಬರು ಬೆಂಗಳೂರು ನಗರದ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ರು. ಇಬ್ಬರು ಒಟ್ಟಿಗೆ ಸ್ಟೇಡಿಯಂಗೆ ಬಂದಿದ್ರು. ಈ ವೇಳೆ ಕಾಲ್ತುಳಿತವಾಗಿ ಗಂಡನ ಎದುರೆ ಪತ್ನಿ ಪ್ರಾಣಬಿಟ್ಟಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಷತಾ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿದೆ.

ಅಕ್ಷತಾ
ಅಕ್ಷತಾ

ಇನ್ನು ಘೋರ ಕಾಲ್ತುಳಿತದಲ್ಲಿ ಕೋಲಾರ ಮೂಲದ ಯುವತಿ ಸಾವನ್ನಪ್ಪಿದ್ದಾಳೆ. ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದ ಸುರೇಶ ಬಾಬು ಮತ್ತು ಮಂಜುಳಾ ಅವರ ಪುತ್ರಿ ಸಹನಾ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ಲು. RCB ಸೆಲಬ್ರೇಷನ್ ನೋಡಲು ಸ್ನೇಹಿತರ ಜೊತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ಲು. ಆದ್ರೆ ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದಾಳೆ. ಸದ್ಯ ಸಹನಾ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗಿದೆ. ಸಹನಾ ಮೃತದೇಹವನ್ನು ಕೋಲಾರ ನಗರದ ಎಸ್.ಜಿ. ಬಡಾವಣೆಯಲ್ಲಿ ಇರುವ ನಿವಾಸ ಕೊಂಡೊಯ್ಯಲಾಗಿದೆ. ಸಹನಾ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಸಹನಾ
ಸಹನಾ

ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನೂಕು ನುಗ್ಗಲು ಉಂಟಾಗಿ ಚಿಕ್ಕಬಳ್ಳಾಪುರದ ಪ್ರಜ್ವಲ್ ಎಂಬವರು ನಿಧನರಾಗಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ನಿನ್ನೆ ಒಂದು ಖಾಸಗಿ ಕಂಪನಿಯಲ್ಲಿ ಇಂಟರ್​​ವ್ಯೂ ಮುಗಿಸಿದ್ದರು. ಆ ಬಳಿಕ ಪ್ರಜ್ವಲ್ ವಿಜಯೋತ್ಸವಕ್ಕೆ ಹೋಗಿದ್ದು, ಮನೆಯವರಿಗೆ ಗೊತ್ತಿರಲಿಲ್ಲ. ಆದ್ರೆ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ.

ಪ್ರಜ್ವಲ್
ಪ್ರಜ್ವಲ್

ಕಾಲ್ತುಳಿತ ದುರಂತದಲ್ಲಿ 14 ವರ್ಷದ ಬಾಲಕಿ ದಿವ್ಯಾನ್ಷಿ ಮೃತಪಟ್ಟಿದ್ದಾರೆ. ಯಲಹಂಕ ಕಣ್ಣೂರಿನ ನಿವಾಸಿ ಶಿವಕುಮಾರ್, ಅಶ್ವಿನಿ ದಂಪತಿ‌ ಮಗಳಾದ ದಿವ್ಯಾನ್ಷಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು. ದಿವ್ಯಾನ್ಷಿ ಚಿನ್ನಸ್ವಾಮಿ ಸ್ಟೇಡಿಯಂಗೆ ಚಿಕ್ಕಮ್ಮ ರಚನಾ ಇನ್ನಿಬರ ಜೊತೆ ಬಂದಿದ್ರು. ದಿವಾನ್ಷಿ ಕಾಲ್ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ದಿವ್ಯಾನ್ಷಿ
ದಿವ್ಯಾನ್ಷಿ

ದ್ವಿತೀಯ ಪಿಯುಸಿಗೆ ಸೇರಲು ಟಿಸಿ ತರಲು ಬಂದಿದ್ದ ವಿದ್ಯಾರ್ಥಿ ಶಿವಲಿಂಗ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಯಾದಗಿರಿಯ ರಾಮಸಂದ್ರ ಮೂಲದ ವಿದ್ಯಾರ್ಥಿ ಶಿವಲಿಂಗ, ಯಲಹಂಕ ಕಣ್ಣೂರಿನಲ್ಲಿ ವಾಸವಾಗಿದ್ದರು. ತಂದೆ ತಾಯಿ ಇಬ್ಬರು ಗಾರೆ ಕೆಲಸ ಮಾಡಿ ಶಿವಲಿಂಗನನ್ನ ಓದಿಸುತ್ತಿದ್ದರು. ಆದ್ರೆ, ಟಿಸಿ ತರಲು ಬೆಂಗಳೂರಿಗೆ ಬಂದಿದ್ದ ಶಿವಲಿಂಗ ಆರ್​ಸಿಬಿಯ ವಿಜಯೋತ್ಸವವನ್ನ ಕಣ್ತುಂಬಿಕೊಳ್ಳಲು ನೇರವಾಗಿ ಸ್ಟೇಡಿಯಂಗೆ ಬಂದಿದ್ದಾನೆ. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ.

ಶಿವಲಿಂಗ
ಶಿವಲಿಂಗ

ಮಂಡ್ಯದಿಂದ ಸೆಲಬ್ರೇಷನ್​ ನೋಡಲು ಬಂದಿದ್ದ 26 ವರ್ಷದ ಪೂರ್ಣಚಂದ್ರ ಕೂಡ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾನೆ. ಕೆ.ಆರ್ ಪೇಟೆ ರಾಯಸಮುದ್ರದ ನಿವಾಸಿಯಾಗಿರೋ ಪೂರ್ಣಚಂದ್ರ ಸಿವಿಲ್ ಇಂಜಿನಿಯರ್ ಕೆಲಸ ಮಾಡ್ತಿದ್ದ. ಕಾಲ್ತುಳಿತದಲ್ಲಿ ಅಸ್ವಸ್ಥನಾಗ್ತಿದ್ದಂತೆ ಸಿಪಿಆರ್​ ನೀಡಲಾಯ್ತು. ಆದ್ರೂ ಪೂರ್ಣಚಂದ್ರ ಬದುಕುಳಿಲಿಲ್ಲ. ಸದ್ಯ ಪೂರ್ಣಚಂದ್ರ ಮೃತದೇಹ ಹುಟ್ಟೂರು ತಲುಪಿದೆ. ಮಗನ ದೇವವನ್ನು ನೋಡಿದ ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.

ಪೂರ್ಣಚಂದ್ರ
ಪೂರ್ಣಚಂದ್ರ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಯಕ್ಷಗಾನ ಕಲಾವಿದೆ ಆಗಿರೋ ಬಹುಮುಖಿ ಪ್ರತಿಭೆ ಚಿನ್ಮಯಿ ಶೆಟ್ಟಿ ಜೀವಬಿಟ್ಟಿದ್ದಾಳೆ. ಇವರು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಆಗಿದ್ದರು. ‘ಯಕ್ಷತರಂಗ ಬೆಂಗಳೂರು’ ರಲ್ಲಿ ಯಕ್ಷಗಾನ ಕಲಿಯುತ್ತಿದ್ದರು. ಮುದ್ದಾದ ಮಗಳ ಮೇಲೆ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು. ಇದೀಗ ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಿನ್ಮಯಿ ಶೆಟ್ಟಿ
ಚಿನ್ಮಯಿ ಶೆಟ್ಟಿ

ಕಾಲ್ತುಳಿತದಲ್ಲಿ ಅಂಬೇಡ್ಕರ್ ಕಾಲೇಜಿನ ಡೆಂಟಲ್ ವಿದ್ಯಾರ್ಥಿ ಶ್ರವಣ್ (20) ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಮೃತದೇಹ ಚಿಕ್ಕಬಳ್ಳಾಪುರದ ಚಿಂತಾಮಣಿಯ ಕುರುಟಹಳ್ಳಿ ಗ್ರಾಮವನ್ನ ತಲುಪಿದೆ. ಮೃತದೇಹ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಾಲ್ತುಳಿತದಲ್ಲಿ ಪಾನಿಪುರಿ ವ್ಯಾಪಾರಿಯ ಮಗ ಮನೋಜ್ ಎಂಬುವವರು ಜೀವಬಿಟ್ಟಿದ್ದಾರೆ. ಇವರ ತಂದೆ ಪಾನಿಪುರಿ ಮಾರಾಟ ಮಾಡಿ ಮಗನನ್ನ ಓದಿಸುತ್ತಿದ್ದರಂತೆ. ಬೆಂಗಳೂರಿನ ಯಲಹಂಕದ ರೆಸಿಡೆನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಮೂಲತಃ ತುಮಕೂರಿನ ಕುಣಿಗಲ್​ನ ಯಡಿಯೂರಿನವರಾಗಿದ್ದಾರೆ.

ಕಾಲ್ತುಳಿತದಲ್ಲಿ ತಮಿಳುನಾಡಿನ ಕೊಯಮತ್ತೂರಿನ ದೇವಿ ಎಂಬುವವರು ನಿಧನರಾಗಿದ್ದಾರೆ. ಇವರು ದೇವಿಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದರು. ಇದೀಗ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ತಮಿಳುನಾಡಿನ ಕೊಯಮತ್ತೂರಿಗೆ ಮೃತದೇಹ ರವಾನಿಸಲಾಗುತ್ತದೆ. ಪೋಟೋ ಲಭ್ಯವಾಗಿಲ್ಲ.

ಇದನ್ನೂ ಓದಿ : ಕಾಲ್ತುಳಿತ ದುರಂತ – 11 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ.. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

Btv Kannada
Author: Btv Kannada

Read More