ಮಾತೇ ಬರುತ್ತಿಲ್ಲ, ತುಂಬಾ ದುಃಖವಾಗಿದೆ – ಕಾಲ್ತುಳಿತ ದುರಂತಕ್ಕೆ ವಿರಾಟ್​​ ಕೊಹ್ಲಿ ಸಂತಾಪ!

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ಆಚರಣೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಅಭಿಮಾನಿಗಳ ಸಾವು-ನೋವಿಗೆ ವಿರಾಟ್‌ ಕೊಹ್ಲಿ ಸಂತಾಪ ಸೂಚಿಸಿದ್ದಾರೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಹಾಕಿರುವ ಅವರು, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿನಿಂದ ತೀವ್ರ ದುಃಖಿತನಾಗಿದ್ದೇನೆ. ಬಾಯಿಂದ ಮಾತುಗಳೇ ಹೊರಡುತ್ತಿಲ್ಲ ಎಂದು ಕೊಹ್ಲಿ ಶೋಕಿಸಿದ್ದಾರೆ.

ತಮ್ಮ ನೋವಿನ ಜೊತೆಗೆ ಕೊಹ್ಲಿ, ಆರ್‌ಸಿಬಿಯ ನೋವಿನ ಸಂದೇಶವನ್ನು ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ ಆರ್‌ಸಿಬಿ, ಬುಧವಾರ ಮಧ್ಯಾಹ್ನ ತಂಡದ ಆಗಮನದ ನಿರೀಕ್ಷೆಯಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ದುರಂತದ ಬಗ್ಗೆ ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿರುವ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದೆ.

ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪಗಳು. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ತಿದ್ದುಪಡಿ ಮಾಡಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ಆರ್‌ಸಿಬಿ ಅಭಿಮಾನಿಗಳು ದಯವಿಟ್ಟು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದೆ.

18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ ಟ್ರೋಫಿ ಜಯಸಿದೆ. ಅದೇ ಖುಷಿಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಿರೀಕ್ಷೆಯಂತೆ ಬೆಂಗಳೂರು ಆರ್‌ಸಿಬಿ ತಂಡದ ಆಟಗಾರರು ಆಗಮಿಸಿದ್ದರು. ಅವರನ್ನು ಸರ್ಕಾರದಿಂದ ಅಭಿನಂದಿಸಲಾಯಿತು. ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ದುರಂತ ಸಂಭವಿಸಿ, 11 ಮಂದಿ ಮೃತಪಟ್ಟರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಇದನ್ನೂ ಓದಿ : ಕಾಲ್ತುಳಿತ ದುರಂತದಲ್ಲಿ ಮಂಡ್ಯದ ಯುವಕ ಸಾವು – ಮೃತನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ MLA ಎಚ್‌.ಟಿ ಮಂಜು!

Btv Kannada
Author: Btv Kannada

Read More