ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ RCB ವಿಜಯ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ನೂಕುನುಗ್ಗಲಿನಲ್ಲಿ 35ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಇದ್ರಲ್ಲಿ 16 ಮಂದಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ 7 ಅಭಿಮಾನಿಗಳು ಸಾವನ್ನಪ್ಪಿದ್ರೆ, ವೈದೇಹಿ ಆಸ್ಪತ್ರೆಯಲ್ಲಿ 4 ಮಂದಿ ಕೊನೆಯುಸಿರೆಳೆದಿದ್ದಾರೆ. 12 ಮಂದಿಗೆ ಚಿಕಿತ್ಸೆ ನೀಡಲಾಗ್ತಿದೆ. ಅಸ್ವಸ್ಥರಾದವರಿಗೆ ಸೂಕ್ತ ಚಿಕಿತ್ಸೆ ಮುಂದುವರಿದಿದೆ. ಈ ಪೈಕಿ ದುರಂತದಲ್ಲಿ ಮಂಡ್ಯದ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ(26) ಎಂಬ ಯುವಕ ಸಾವನ್ನಪ್ಪಿದ್ದಾನೆ.
ಮಂಡ್ಯದ ಕೆ.ಆರ್.ಪೇಟೆಯ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ ಮೈಸೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ವಿಜಯ ಸಂಭ್ರಮ ಕಣ್ತುಂಬಿಕೊಳ್ಳಲು ಮೈಸೂರಿಂದ ಬೆಂಗಳೂರಿಗೆ ತೆರಳಿದ್ದ ಈ ಅಭಿಮಾನಿ, RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ ಅಸುನೀಗಿದ್ದಾನೆ. ಸಾವಿನ ಸುದ್ದಿ ಕೇಳಿ ಪೂರ್ಣಚಂದ್ರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಕಾಲ್ತುಳಿತ ಸಂಭವಿಸಿ ಜಿಲ್ಲೆಯ ಯುವಕ ಸಾವನ್ನಪಿರೋ ಸುದ್ದಿ ತಿಳಿದು ಕೆ.ಆರ್ ಪೇಟೆ MLA ಎಚ್.ಟಿ ಮಂಜು ಅವರು ಮೃತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ದುರಂತದ ಮಾಹಿತಿ ಸಿಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನ ವಿಚಾರಿಸಿದ್ದಾರೆ. ವೈದೇಹಿ, ಬೌರಿಂಗ್ ಆಸ್ಪತ್ರೆಗೆ ತೆರಳಿದ ಸಿಎಂ ಗಾಯಾಳುಗಳ ಆರೋಗ್ಯವನ್ನ ವಿಚಾರಿಸಿದ್ದಾರೆ. ಅಲ್ಲದೇ ಮೃತರಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ಪ್ರತಿಯೊಬ್ಬರ ಸುರಕ್ಷತೆ, ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯ – ಕಾಲ್ತುಳಿತ ದುರಂತದ ಬಗ್ಗೆ RCB ಹೇಳಿದ್ದೇನು?
