ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಹುವರ್ಷದ ಕನಸು ನನಸಾಗಿದ್ದು, 18 ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಆರ್‌ಸಿಬಿ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ವಿರಾಟ್ ಕೊಹ್ಲಿಯ ವರ್ಷಗಳ ಹಳೆಯ ಕನಸು ಕೂಡ ಅಂತಿಮವಾಗಿ ನನಸಾಯಿತು. ವಿರಾಟ್ ಮೊದಲ ಸೀಸನ್‌ನಿಂದ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಐತಿಹಾಸಿಕ ಗೆಲುವಿನ ನಂತರ ಕೊಹ್ಲಿ ತುಂಬಾ ಭಾವುಕರಾಗಿದ್ದರು.
18 ವರ್ಷಗಳಲ್ಲಿ ಆರ್ಸಿಬಿಯ ಮೊದಲ ಜಯಭೇರಿ ಬಗ್ಗೆ ವಿರಾಟ್ ಕೊಹ್ಲಿ ಅವರು ತಮ್ಮ ಇನ್ಸ್ಟಾದಲ್ಲಿ ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ. ನಾಲ್ಕು ಫೋಟೋಗಳನ್ನು ಹಂಚಿಕೊಂಡ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ‘ಈ ಕನಸನ್ನು ನನಸಾಗಿಸಿದ ತಂಡ ಇದು. ಈ ಋತುವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದ ನಾವು ಹೃದಯದಿಂದ ಆಡಿದ್ದೇವೆ ಮತ್ತು ಪ್ರತಿ ಕ್ಷಣವನ್ನು ಆನಂದಿಸಿದ್ದೇವೆ. ಈ ಗೆಲುವು ಪ್ರತಿಯೊಂದು ಕಷ್ಟದ ಸಮಯದಲ್ಲೂ ನಮ್ಮೊಂದಿಗೆ ನಿಂತ ಅಭಿಮಾನಿಗಳಿಗೆ. ಈ ಗೆಲುವು ನಾವು ಈ ತಂಡಕ್ಕಾಗಿ ಮೈದಾನದಲ್ಲಿ ನೀಡಿದ ಪ್ರತಿಯೊಂದು ಪ್ರಯತ್ನಕ್ಕೂ’ ಎಂದು ಬರೆದಿದ್ದಾರೆ.
ಫೈನಲ್ ಪಂದ್ಯ ಹೇಗಿತ್ತು? ಐಪಿಎಲ್ ಫೈನಲ್‌ನಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ 3 ಬೌಂಡರಿಗಳ ಸಹಾಯದಿಂದ ಆರ್‌ಸಿಬಿ ಪರ ಅತಿ ಹೆಚ್ಚು 43 ರನ್ ಗಳಿಸಿದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ 3-3 ವಿಕೆಟ್ ಪಡೆದರು. 191 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಿಬಿಕೆಎಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಲು ಸಾಧ್ಯವಾಯಿತು ಮತ್ತು ಪಂದ್ಯವನ್ನು 6 ರನ್‌ಗಳಿಂದ ಸೋತಿತು. ಪಂಜಾಬ್ ಪರ ಶಶಾಂಕ್ ಸಿಂಗ್ ಅಜೇಯ 61 ರನ್ ಗಳಿಸಿದರು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ 2-2 ವಿಕೆಟ್ ಪಡೆದರು.
ಇದನ್ನೂ ಓದಿ : ಇಂದೇ ಬೆಂಗಳೂರಿಗೆ ಚಾಂಪಿಯನ್ಸ್ – ಸಂಜೆ RCB ಐತಿಹಾಸಿಕ ವಿಕ್ಟರಿ ಪರೇಡ್.. ಎಲ್ಲಿಂದ, ಎಲ್ಲಿಗೆ? ಇಲ್ಲಿದೆ ಮಾಹಿತಿ!
